ಅಂಗನವಾಡಿ ಕಾರ್ಯಕರ್ತರಿಗೆ ಅನುಕೂಲ
ಕಪ್ರ ವಾರ್ತೆ , ಕೋಲಾರ , ಅ.24
ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಗೌರವಧನ ಹೆಚ್ಚಿಸುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸಿದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಗೌರವ ಧನ ನೀಡುತ್ತಿರುವುದರಿಂದ ಆಶಾ ಕಾರ್ಯಕರ್ತರಿಗೆ ಕೊಂಚ ಅನುಕೂಲವಾಗಿದೆ. ಮುಂದಿನ ಬಜೆಟ್‌ನಲ್ಲಿ ಅಕ್ಷರ ದಾಸೋಹ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭರವಸೆ ನೀಡಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಬುಧವಾರ ಪ್ರಜಾಸೇವಾ ಸಮಿತಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿ, ಆರೋಗ್ಯ ಆಶಾ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಅಕ್ಷರ ದಾಹೋಸ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿ ಜಿಲ್ಲೆಯ ಜನರ ಕೈಯಲ್ಲಿದೆ, ಸಂಘಟನೆಗಳು ಪರಸ್ವರ ಪ್ರೀತಿ, ವಿಶ್ವಾಸದಿಂದ ಒಗ್ಗೂಡಿ ಕೆಲಸ ಮಾಡಿದಲ್ಲಿ ಜಿಲ್ಲೆಯ ಪ್ರಗತಿ ಹೆಚ್ಚುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಯದೇವ್, ನಗರಸಭೆ ಸದಸ್ಯ ಪ್ರಸಾದ್ ಬಾಬು, ವಿ. ಮೀನಾಕ್ಷಿ, ವಿ. ಜಮುನಾರಾಣಿ, ನಿರ್ಮಲಾಬಾಯಿ, ಸುಬ್ಬುಲಕ್ಷ್ಮಿ, ಶಾಂತಮ್ಮ, ಸುಧಾ, ಗಿರಿಜಾ, ಶಕುಂತಲಾ, ಮುನಿಯಮ್ಮ, ಗಾಂಧಿನಗರ ವಿ.ಚಂದ್ರಕುಮಾರ್, ಎಸ್. ರಾಮಚಂದ್ರಯ್ಯ, ಕಲ್ವ ಕೆ.ಎಸ್. ರಾಮಾನುಜಂ, ಮುನೇಗೌಡ, ರಾಮಸಂದ್ರ ಮುನಿಯಪ್ಪ, ಶಕುಂತಲಾ ಇದ್ದರು.