ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದ್ಯೋಗ ಖಾತ್ರಿಗೆ ಆಗ್ರಹಿಸಿ ಯಲ್ಲಂಪಲ್ಲಿ ಗ್ರಾಪಂ ಮುತ್ತಿಗೆ

Vishwanath S
Updated On : 25 Oct 2013, 12:22 pm

ಬಾಗೇಪಲ್ಲಿ: ನರೇಗಾ ಯೋಜನೆಯಡಿ ಸರಿಯಾಗಿ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರ ನೇತೃತ್ವದಲ್ಲಿ ರೈತರು ತಾಲೂಕಿನ ಯಲ್ಲಂಪಲ್ಲಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾಕಷ್ಟು ಅನುದಾನವಿದ್ದು ಗ್ರಾ.ಪಂ.ವ್ಯಾಪ್ತಿಯಲ್ಲಿನ ಎಲ್ಲಾ ಬಡ ಕುಟುಂಬಗಳಿಗೆ ಕೆಲಸ ನೀಡುವ ಅವಕಾಶವಿದ್ದರೂ ಕೆಲಸವನ್ನು ನೀಡದೆ ಕೃಷಿ ಕೂಲಿಕಾರರಿಗೆ, ದೀನದಲಿತರಿಗೆ ಹಾಗೂ ರೈತರಿಗೆ ಗ್ರಾ.ಪಂ ಅಧಿಕಾರಿಗಳು ವಂಚನೆ ಮಾಡಿದ್ದಾರೆಂದು ಆರೋಪಿಸಿದರು.
ತಾಲೂಕಿನ ಯಲ್ಲಂಪಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 1569 ಕುಟುಂಬಗಳಿದ್ದು ಬಹುತೇಕ ಎಲ್ಲಾ ಕುಟುಂಬಗಳು ಜಾಬಬ್ಕಾರ್ಡುಗಳನ್ನು ಹೊಂದಿರುತ್ತಾರೆ. ಆದರೆ ಗ್ರಾ.ಪಂ. ಕಾರ್ಯದರ್ಶಿ ಮತ್ತು ಪಿಡಿಓ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಈ ಯೋಜನೆಯಡಿಯಲ್ಲಿ ಕೇವಲ 52 ಕುಟುಂಬಗಳಿಗೆ ಮಾತ್ರ ಕೆಲಸವನ್ನು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಯಲ್ಲಂಪಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ದಲಿತ, ರೈತ ಮತ್ತು ಕೃಷಿ ಕೂಲಿಗಾರರ ಗುಂಪುಗಳು ನರೇಗಾ ಯೋಜನೆಯಡಿಯಲ್ಲಿ ಕೆಲಸವನ್ನು ನೀಡುವಂತೆ ಅರ್ಜಿಗಳನ್ನು ನೀಡಿ ಹಲವು ತಿಂಗಳು ಕಳೆದಿದೆಯಾದರೂ ಇದುವರೆಗೂ ಕೆಲಸ ನೀಡಿಲ್ಲ, ಈ ಯೋಜನೆಯಲ್ಲಿ ಹಲವಾರು ವೈಯಕ್ತಿಕ ಕಾಮಗಾರಿಗಳು, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ದಲಿತರಿಗೆ ಕೆಲಸವನ್ನು ನೀಡುವ ಅವಕಾಶವಿದ್ದರೂ ಕೆಲಸವನ್ನು ನೀಡದೇ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಇದುವರೆಗೂ ಹಣ ಬಿಡುಗಡೆಗೊಳಿಸಿಲ್ಲ.ಉಧ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಎಲ್ಲಾ ಬಡಕುಟುಂಬಗಳಿಗೆ ಪಾರದರ್ಶಕವಾಗಿ ಕೆಲಸವನ್ನು ಹಾಗೂ ಸರ್ಕಾರದ ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಇರುವಂತಹ ಗ್ರಾ.ಪಂ. ಅಧಿಕಾರಿಗಳೇ ಈ ಯೋಜನೆಯನ್ನು ತಪ್ಪುದಾರಿಗೆಳೆಯುವ ಮೂಲಕ ಬಡ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆಂದು ಆರೋಪಿಸಿದರು.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಈ ಭಾಗದ ಬಹುತೇಕ ಕುಟುಂಬಗಳು ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲದೆ ಬೆಂಗಳೂರಿನಂತಹ ಮಹಾ ನಗರ ಪ್ರದೇಶಗಳಿಗೆ ಕೆಲಸವನ್ನು ಹುಡುಕಿಕೊಂಡು ಗುಳೇ ಹೋಗುತ್ತಿದ್ದಾರೆ, ಈ ಪರಿಸ್ಥಿತಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಅಧಿಕಾರಿಗಳು ಈ ಯೋಜನೆಯಡಿಯಲ್ಲಿ ಸಮರ್ಪಕವಾಗಿ ಕೆಲಸವನ್ನು ನೀಡದೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಈ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ನೋಡಲ್ ಅಧಿಕಾರಿ, ಕಾರ್ಯದರ್ಶಿ, ಪಿಡಿಓ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟರಾಮರೆಡ್ಡಿ, ರಾಜಪ್ಪ, ಗಂಗರಾಜು, ವೆಂಕಟನಾರಾಯಣ, ರಾಮಾಂಜಿ, ಶ್ರೀರಾಮ ನಾಯ್ಕ್, ಬಾಬುರೆಡ್ಡಿ, ಚೌಡಪ್ಪ, ಕೃಷ್ಣಪ್ಪ, ಮಂಜುನಾಥರೆಡ್ಡಿ, ರಾಮಲಿಂಗಪ್ಪ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement