ಕಾಂಗ್ರೆಸ್ ಕಾಣೆಯಾಗಲಿದೆ; ಎಚ್ಡಿಕೆ ಭವಿಷ್ಯ
ಶ್ರೀನಿವಾಸಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟ ಆಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಅವರು ಪಟ್ಟಣದ ಕರಗದಾಂಭ ದೇವಿ ದೇವಾಲಯದ ಮಹಾದ್ವಾರ ಹಾಗೂ ಮಹಾಗೋಪುರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿ, ರಾಜ್ಯದಲ್ಲಿ ಹಸುಗಳಿಗೆ ತೆಲೆದೊರಿರುವ ಕಾಲುಬಾಯಿ ಜ್ವರದಿಂದ ರೈತರ ಬದುಕಿಗೆ ಕೊಡಲಿ ಪೆಟ್ಟು ಬಿದ್ದಿದ್ದು ಗಾಢ ನಿದ್ರೆಯಲ್ಲಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸತ್ತಿರುವ ಹಸುಗಳಿಗೆ ತಲಾ 25 ಸಾವಿರ ನೀಡಬೇಕೆಂದು ಒತ್ತಾಯಿಸಿರುವುದಾಗಿ, ಹಾಗೂ ತನ್ನ ಸ್ವಂತ ಹಣದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತಲಾ 5 ಸಾವಿರ ನೀಡುತ್ತಿರುವುದಾಗಿ ಹೇಳಿದರು.
ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಜಿಪಂ ಅಧ್ಯಕ್ಷ ಆರ್. ನಾರಾಯಣಸ್ವಾಮಿ, ಸಿ. ಮುನಿಯಪ್ಪ, ತಾಪಂ ಅಧ್ಯಕ್ಷ ಬಿ.ವಿ. ಕೃಷ್ಣಾರೆಡ್ಡಿ, ತೂಪಲ್ಲಿ ಚೌಡರೆಡ್ಡಿ ಇದ್ದರು.
ರೈತಸಂಘದ ಪೂರ್ವಭಾವಿ ಸಭೆ
ಶಿಡ್ಲಘಟ್ಟ: 28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಮಾವೇಶದ ಪೊರ್ವಭಾವಿ ಸಭೆ ನಡೆಯಿತು.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಸಂಚಾಲಕಿ ಅನುಸೊಯಮ್ಮ, ರೈತನೆ ದೇಶದ ಬೆನ್ನೆಲುಬು ಎಂದು ಹೇಳಿದ ಸರ್ಕಾರ ರೈತನ ಬೆನ್ನೆಲುಬನ್ನು ಮುರಿಯುತ್ತಿದೆ ಎಂದು ಆರೋಪಿಸಿದರು. 28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಸಮಾವೇಶದಲ್ಲಿ ಕಿವುಡು ಸರ್ಕಾರಕ್ಕೆ ಕೇಳಿಸುವ ಹಾಗೆ ರೈತರು ಸಮಾವೇಶ ಮಾಡುವುದಾಗಿ ತಿಳಿಸಿದರು.
ಶ್ರೀನಿವಾಸ್ ಮಾತನಾಡಿ, ರೈತರಿಗೆ ತಾಲೂಕು ಕಚೇರಿಯಿಂದ ಅನ್ಯಾಯವಾಗುತ್ತಿದ್ದು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಜಿಲ್ಲಾ ಸಂಚಾಲಕ ಅನುಸೂಯಮ್ಮ, ಪಾರ್ವತಮ್ಮ, ಡಿ.ಕೆ. ಮುನಿಕೆಂಪಣ್ಣ, ತಿರುಮಳಪ್ಪ, ಜಗದೀಶ್, ಚಂದ್ರಣ್ಣ, ಬೈರಪ್ಪ, ಅಂಜಿನಪ್ಪ, ಹುನುಮಂತು, ನಾಗರೆಡ್ಡಿ ಇದ್ದರು.
ಫ್ಲೆಕ್ಸ್ ಹಾಕಲು ನಗರಸಭೆ ಅನುಮತಿ ಕಡ್ಡಾಯ
ಕೆಜಿಎಫ್: ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನೆರ್ಗಳನ್ನು ಅಳವಡಿಸಲು ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ನಗರಸಭೆ ಪೌರಾಯುಕ್ತ ಬಾಲಚಂದ್ರ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಇತರೆ ಸಂಘ ಸಂಸ್ಥೆಗಳು ಪರಭಾಷೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಅಳವಡಿಸುವುದನ್ನು ಖಂಡಿಸಿ ನಗರದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಇತರೆ ಸಂಘ ಸಂಸ್ಥೆಗಳು ನಗರ ವ್ಯಾಪ್ತಿಯಲ್ಲಿ ತಮಿಳು ಹಾಗೂ ಇತರೆ ಪರಭಾಷೆಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನೆರ್ಗಳನ್ನು ಅಳವಡಿಸಲು ನಗರಸಭೆ ವತಿಯಿಂದ ಅನುಮತಿ ನೀಡುವುದಿಲ್ಲ ಮತ್ತು ಅಂತಹ ಫ್ಲೆಕ್ಸ್ಗಳನ್ನು ತೆರವುಗೊಳಿಸಿ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಜ್ಯೋತ್ಸವ ಪೂರ್ವಭಾವಿ ಸಭೆ
ಶಿಡ್ಲಘಟ್ಟ: ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯನ್ನು ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಹಸೀಲ್ದಾರ್ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳಿಗೂ ಸಭೆಯ ಬಗ್ಗೆ ಮಾಹಿತಿ ನೀಡುವುದಾಗಿ, ಪ್ರಸ್ತುತ ನಡೆದ ಅಚಾತುರ್ಯಕ್ಕೆ ಕ್ಷಮೆ ಯಾಚಿಸಿದರು. ನವೆಂಬರ್ ತಿಂಗಳಿನಲ್ಲಿ ಪಟ್ಟಣದ ಚಿತ್ರ ಮಂದಿರಗಳಲ್ಲಿ ಕನ್ನಡ ಚಿತ್ರ ಹಾಕುವಂತೆ ಚಿತ್ರ ಮಂದಿರದ ಮಾಲಿಕರನ್ನು ಸಭೆ ಕರೆಸಿ ಮಾತನಾಡುವುದಾಗಿ, ಎಸ್ಎಸ್ಎಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ 3 ಜನ ಪ್ರತಿಬಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಾಗಿ ತಿಳಿಸಿದರು. ಎಲ್ಲ ಕಚೇರಿಗಳಲ್ಲಿ 8 ಕ್ಕೆ ದ್ವಜಾರೋಹಣ ಮಾಡಿ, 8.30ಕ್ಕೆ ಪುರಸಭೆ ಮುಂಬಾಗದಿಂದ ಹೊರಡುವ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಎಲ್ಲ ಅಧಿಕಾರಿಗಳೂ, ಪುರಸಭೆ ಸದಸ್ಯರು ಭಾಗವಹಿಸಬೇಕೆಂದು, ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರು. ಎರಡನೇ ದರ್ಜೆ ತಹಸೀಲ್ದಾರ್ ರಮೇಶ್, ಪುರಸಭೆ ಮುಖ್ಯಾಧಿಕಾರಿ ಚೆನ್ನರಾಯಪ್ಪ, ಸಂಘ ಸಂಸ್ಥೆಗಳ ಪ್ರತಿನಿದಿಗಳು ಭಾಗವಹಿಸಿದ್ದರು.
ಸಚಿವ ಲಾಡ್ ರಾಜಿನಾಮೆಗೆ ಆಗ್ರಹ
ಕೋಲಾರ: ವಿರೋಧ ಪಕ್ಷದಲ್ಲಿದ್ದಾಗ ಗಣಿ ಅಕ್ರಮದ ಬಗ್ಗೆ ಹೋರಾಟ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತ ತಮ್ಮ ಸಚಿವ ಸಂಪುಟದಲ್ಲಿ ಗಣಿ ಅಕ್ರಮದ ಆರೋಪ ಹೊತ್ತಿರುವ ಸಚಿವ ಸಂತೋಷ್ ಲಾಡ್ ಅವರ ರಕ್ಷಣೆಗೆ ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜ ಪರಿವರ್ತನಾ ಸಮಿತಿಯ ಮುಖ್ಯಸ್ಥರಾದ ಎಸ್.ಆರ್. ಹಿರೇಮಠ ಅವರು ದಾಖಲೆ ಸಹಿತ ಸಂತೋಷ್ಲಾಡ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಿಇಸಿ ವರದಿಯಲ್ಲಿ ಸಚಿವರ ಹೆಸರು ಪ್ರಸ್ತಾಪವಾಗಿರುವುದರಿಂದ ಮುಖ್ಯಮಂತ್ರಿಗಳು ತಕ್ಷಣ ಲಾಡ್ ಅವರ ರಾಜಿನಾಮೆ ವಡೆಯಲು ಇಲ್ಲವೆ ಸಂಪುಟದಿಂದ ವಜಾ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಕಲಹ; ಪತಿಯಿಂದ ಪತ್ನಿ ಕೊಲೆ
ಮುಳಬಾಗಲು: ತಾಲೂಕಿನ ದೊಡ್ಡಗುರ್ಕಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಕುಟುಂಬದ ಕಲಹದ ಹಿನ್ನಲೆಯಲ್ಲಿ ವೃಕ್ತಿಯೊಬ್ಬರು ಪತ್ನಿಯನ್ನು ಕೊಲೆಗೈದು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೆಂಕಟಲಕ್ಷ್ಮಮ್ಮ ಮತ್ತು ಕೃಷ್ಣಪ್ಪರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳಿಗೆ ತಲಾ ಹತ್ತು ರು. ನೀಡಿ ಅಂಗಡಿಗೆ ಹೋಗಲು ತಿಳಿಸಿದ ಕೃಷ್ಣಪ್ಪ ಪತ್ನಿಯ ಕತ್ತುಹಿಸುಕಿ ಕೊಲೆಗೈದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಮುಳಬಾಗಲು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೋತಿ ಮರಿ ಸಾವಿಗೆ ತಾಯಿ ರೋದನ
ಕೋಲಾರ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿ ಮರಿಯನ್ನು ತಾಯಿ ಬಾಚಿ ತಬ್ಬಿಕೊಂಡು ರೋಧಿಸಿದ ಘಟನೆ ಸಾರ್ವಜನಿಕರ ಮನ ಕಲುಕಿತು. ನಗರದ ಗೌರಿಪೇಟೆಯಲ್ಲಿ ಗುರುವಾರ ಕೋತಿಗಳ ಹಿಂಡು ಮರವೊಂದರ ಮೇಲೆ ಚೇಷ್ಟೆ ಮಾಡುತ್ತಿದ್ದಾಗ, ಗಡವ ಕೋತಿಯೊಂದು ಕೋತಿ ಮರಿಯ ಮೇಲೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಕೋತಿ ಮರಿ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು.
ಕೋತಿ ಮರಿಯ ರೋದನ ಕೇಳಿ ಇತರೆ ಕೋತಿಗಳು ಸ್ಥಳದಿಂದ ಪಲಾಯನಗೈದವು. ಆದರೆ, ಮರಿಯ ತಾಯಿ ತಕ್ಷಣ ಮರದಿಂದ ಜಿಗಿದು ನೆಲದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮರಿಯನ್ನು ಬಾಚಿ ತಬ್ಬಿಕೊಂಡು ಮತ್ತೆ ಮರವೇರಿ ಸುಧಾರಿತಲು ಯತ್ನಿಸಿತಾದರೂ ಪ್ರಾಣ ಉಳಿಯಲಿಲ್ಲ. ಮರಿ ಕೋತಿಯ ಸಾವಿನಿಂದ ಮನುಷ್ಯರಂತೆ ತಾಯಿ ರೋಧಿಸಿದ್ದನ್ನು ಕಂಡು ಸಾರ್ವಜನಿಕರು ಅಯ್ಯೋ ಪಾಪ ಎಂದು ಸಂಕಟಪಟ್ಟರು.
ಪರಿಹಾರ ವಿತರಣೆ
ಕೋಲಾರ: ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಷ್ಟ ಅನುಭವಿಸಿರುವ 157 ಜನರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ನೀಡಲಾಗಿದೆ. ನಗರದ ರಹಮತ್ನ್ಗರ, ಶಾಂತಿ ನಗರ, ಕುವೆಂಪು ನಗರ ಸೇರಿದಂತೆ ವಿವಿಧ ಕಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಒಂದು ಮನೆಯ ಗೋಡೆ ಕುಸಿದಿತ್ತು, ಆಹಾರ ಪದಾರ್ಥ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳು ನಾಶವಾಗಿದ್ದವು. ತಾಲೂಕು ಆಡಳಿತ ನಷ್ಟ ಅನುಭವಿಸಿರುವವರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಇದರ ಅನ್ವಯ 157 ಜನರಿಗೆ ಪರಿಹಾರದ ಚೆಕ್ಗಳನ್ನು ತಹಸೀಲ್ದಾರ್ ನಾಗರಾಜ್, ರಾಜಸ್ವ ನಿರೀಕ್ಷಕ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ. ಮನೆ ಗೋಡೆ ಉರುಳಿದ್ದರಿಂದ ನಷ್ಟ ಅನುಭವಿಸಿರುವ ಕುಟುಂಬಕ್ಕೆ 8 ಸಾವಿರ, ಇನ್ನುಳಿದಂತೆ 1500 ರಿಂದ 1200ರುವರೆಗೆ ಪರಿಹಾರ ನೀಡಲಾಗಿದೆ. ರಾಜ ಕಾಲುವೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಯವರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಯೋಜನೆ ಸಿದ್ಧಪಡಿಸಲು ಎಂಜಿನಿಯರ್ಗಳಿಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದ್ದಾರೆ. ಆದರೆ. ಸರ್ವೆ ಕಾರ್ಯ ಮುಗಿಯುವವರೆಗೆ ಸದರಿ ಯೋಜನೆ ಅನುಷ್ಠಾನ ವಿಳಂಬವಾಗುವ ಸಾದ್ಯತೆಗಳಿವೆ.