ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಖಾತ್ರಿ ಸದುಪಯೋಗ ಪಡಿಸಿಕೊಳ್ಳಲು ಮನವಿ

Vishwanath S
Updated On : 25 Oct 2013, 12:25 pm

ಮಾಲೂರು: ಗ್ರಾಮದ ಪ್ರತಿ ಕುಟುಂಬದವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾಲ್ಗೊಳುವ ಮೂಲಕ ಆರ್ಥಿಕ ಪರಿಸ್ಥಿತಿ ಹೆಚ್ಚಿಸಿಕೊಳ್ಳಲು ಚಿಕ್ಕಕುಂತೂರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂದೀಪ್ ಹೇಳಿದರು.
ಪಂಚಾಯ್ತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಸಮನಾಗಿ ಹಂಚಿಕೆ ಮಾಡುತ್ತಿದ್ದು, ಅರ್ಹ ಪಲಾನುಭವಿಗಳು ಯೋಜನೆಯ ಲಾಭ ಪಡೆಯಬೇಕು ಎಂದರು.
ಪಂಚಾಯ್ತಿ ಅಧ್ಯಕ್ಷೆ ಲಕ್ಷಮ್ಮ ಮಾತನಾಡಿದರು. ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಭುವನಹಳ್ಳಿ ಅಬ್ಬಯ್ಯಪ್ಪ, ವನಜಮ್ಮ, ಜ್ಯೋತಿ, ಕಾರ್ಯದರ್ಶಿ ರಾಮೇಗೌಡ, ಬಿಲ್ ಕಲೆಕ್ಟರ್ ಲಕ್ಷಣ್ ರೆಡ್ಡಿ, ಸೂಣ್ಣೆ ಪಿಳ್ಳಪ್ಪ, ಮಂಜುನಾಥ್, ಮುನಿಯಪ್ಪ, ಗೋಪಿನಾಥ್, ಸುಗುಣಮ್ಮ, ಲಾಲು ನಾಯಕ್, ತಿಮ್ಮರಾಯಪ್ಪ, ವೆಂಕಟೇಶಪ್ಪ, ವೆಂಕಟಾಚಲಪತಿ ಇದ್ದರು.
ಕಲಾಶ್ರೀ ಪ್ರಶಸ್ತಿ ಶಿಬಿರದ ಆಯ್ಕೆ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ 26 ರಂದು ತಾಲೂಕು ಮಟ್ಟದ ಬಾಲ ಭವನ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಏರ್ಪಡಿಸಲಾಗಿದ್ದು, ತಾಲೂಕಿನ 9 ರಿಂದ 16 ವರ್ಷದ ವಯೋವುತಿಯೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸಿದ್ದಲಿಂಗಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಶಿಬಿರದಲ್ಲಿ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರ ನಾಲ್ಕು ವಿಧವಾದ ಸ್ಪರ್ಧೆಗಳಿದ್ದು, ಆಸಕ್ತ ಮಕ್ಕಳು ವಯಸ್ಸಿನ ದೃಢೀಕರಣ ದಾಖಲೆಯೊಂದಿಗೆ ಭಾಗವಹಿಸಬಹುದು.  ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ದೂ-08156-261116 ಅಥವಾ ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ದೂ-9844988130ಗೆ ಸಂಪರ್ಕಿಸಲು ಕೋರಿದೆ.
ಹುದ್ದೆಗಳಿಗೆ ಅರ್ಜಿ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಚಿಕ್ಕರ್ಯಾಗಡಹಳ್ಳಿ, ಚರಕಮಟ್ಟೇನಹಳ್ಳಿ, ನಡುವಲಹಳ್ಳಿ, ಸಾದೇನಹಳ್ಳಿ, ಚೀಲಮ್ಮನಹಳ್ಳಿ ಪಡಚಲಹಳ್ಳಿ, ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗೌರಿಬಿದನೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಿನಿ ವಿಧಾನಸೌಧಕ್ಕೆ ವೀರಯ್ಯ ಭೇಟಿ
ಮಾಲೂರು: ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಗುರುವಾರ ಇಲ್ಲಿನ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸಿದರು. ಪಹಣಿ ಕೌಂಟರ್‌ನಲ್ಲಿ ವಿಳಂಬ ಇದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ತಹಸೀಲ್ದಾರ್ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಈ ವಿಚಾರವಾಗಿ ತಹಸೀಲ್ದಾರ್ ಡಾ. ಸುಧಾರನ್ನು ಭೇಟಿ ಮಾಡಿದ ಡಿ.ಎಸ್. ವೀರಯ್ಯ ಇನ್ನೂಂದು ಕೌಂಟರ್ ಪ್ರಾರಂಭಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಡಾ.ಸುಧಾ, ಕಚೇರಿಯ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು 30 ಹುದ್ದೆಗಳು ಖಾಲಿಯಾಗಿವೆ. ಸಿಬ್ಬಂದಿ ಕೊರತೆ ನಡುವೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.  ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ವೆಂಕಟೇಶ್ ಗೌಡ, ರಾಜರಾಂ, ಕೋಲಾರ ನಗರಸಭೆ ಸದಸ್ಯ ಸೋಮಶೇಖರ್, ಕೆಂ.ನಾರಾಯಣಪ್ಪ ಇದ್ದರು.
ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಏನಿಗದೆಲೆ ವಿದ್ಯಾಪೀಠದಲ್ಲಿ ನಿರುದ್ಯೋಗ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ 2013-14ನೇ ಸಾಲಿಗೆ ಐದು ತಿಂಗಳ ಅವಧಿಯ ಉಚಿತ ಹೊಲಿಗೆ ತರಬೇತಿ (ಡ್ರೆಸ್ ಮೇಕಿಂಗ್) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನ.5 ರಿಂದ ತರಬೇತಿಯನ್ನು ನೀಡಲಾಗುತ್ತಿದೆ. 18 ರಿಂದ 30 ವರ್ಷ ವಯೋವುತಿಯುಳ್ಳ ಮತ್ತು ಓದು-ಬರಹ ಬಲ್ಲವರು ಹಾಗೂ ನವಸಾಕ್ಷರರು ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ಶಿಕ್ಷಣಾರ್ಥಿಗಳಿಗೆ ಮಾಹೆಯಾನ 500 ರು. ವಿದ್ಯಾರ್ಥಿವೇತನ ಪಾವತಿಸಲಾಗುತ್ತದೆ. ಮಾಹಿತಿಗಾಗಿ ಮೃ-996130400, 9972637550 ಅನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಂ ಇಒ ವಿರುದ್ಧ ಇಂದು ಪ್ರತಿಭಟನೆ
ಚಿಂತಾಮಣಿ: ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಸಿ. ವಂಸಂತ್ ಕುಮಾರ್ ಕಾರ್ಯವೈಖರಿ ವಿರುದ್ಧ 25 ರಂದು ಮಾದಿಗ ದಂಡೋರ ಹೋರಾಟ ಸಮಿತಿಯಿಂದ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದೆಂದು ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಪಿ.ವಿ. ವೆಂಕಟರವಣಪ್ಪ, ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಎಂ. ದೇವರಾಜ್ ಮತ್ತು ಕೆ.ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಸಿ. ವಂಸಂತ್ ಕುಮಾರ್ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕುರಿ-ಮೇಕೆಗಳಿಗೂ ಕಾಲುಬಾಯಿ ಜ್ವರ
ಶಿಡ್ಲಘಟ್ಟ: ಕುರಿ ಮೇಕೆಗಳಿಗೂ ಕಾಲು ಬಾಯಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು ರೈತರು ಕುರಿ-ಮೇಕೆಗಳಿಗೆ ಲಸಿಕೆಯನ್ನು ಹಾಕಿಸಬೇಕೆಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್ ಗೌಡ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ರೋಗ ಕಾಣಿಸಿಕೊಂಡರೆ ಕುರಿ ಮತ್ತು ಮೇಕೆಯ ಮೂತಿ ದಪ್ಪಗಾಗುವುದು, ನಾಲಿಗೆಯಲ್ಲಿ ಗಾಯ ಆಗುವುದು, ಕಾಲು ಗೊರಸುಗಳಲ್ಲಿ ಗಾಯ ಆಗಿ, ಹುಳ ಬೀಳುವುದು, ಸಪ್ಪಗೆ ನಿಂತಿರುವುದು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೆ ನಾಟಿ ಔಷಧಿಯಾಗಿ ಕೊತ್ತಂಬರಿ ಸೊಪ್ಪು, ಸೌತೇಕಾಯಿ, ಅಡಿಗೆಸೋಡ, ಗ್ಲೂಕೋಸ್ ಪೌಂಡರ್ ಒಂದು ಗಂಟೆಗೊಮ್ಮೆ ಹಾಕುತ್ತಿರಬೇಕು ಎಂದಿದ್ದಾರೆ. ವಿವರಗಳಿಗೆ ಶಿಡ್ಲಘಟ್ಟದಲ್ಲಿ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘವನ್ನು ಸಂಪರ್ಕಿಸಬೇಕೆಂದು ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್ ಗೌಡ ಮೊ-93424-49969 ಗೆ ಸಂಪರ್ಕಿಸಬೇಕೆಂದು ಅವರು ಕೋರಿದ್ದಾರೆ.
ಮಕ್ಕಳ ಕಲಾ ಉತ್ಸವ
ಶ್ರೀನಿವಾಸಪುರ: ಬಾಲ ಭವನ ಸೊಸೈಟಿ, ಮಹಿಳಾ ಮತ್ತು  ಮಕ್ಕಳು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಶು ಅಬಿವೃದ್ಧಿಯೋಜನೆ ಆಶ್ರಯದಲ್ಲಿ 28 ರ ಬೆಳಿಗ್ಗೆ 9.30 ಗಂಟೆಗೆ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾ ಶ್ರೀ ಶಿಬಿರ ಏರ್ಪಡಿಸಲಾಗಿದೆ.
ನಾಳೆ ಗ್ರಾಪಂ ನೌಕರರ ಸಮ್ಮೇಳನ
ಕೋಲಾರ: ಗ್ರಾಮ ಪಂಚಾಯಿತಿ ನೌಕರಿಗೆ ಕನಿಷ್ಟ ವೇತನ ಸೇರಿದಂತೆ ಸರ್ಕಾರದ ಆದೇಶಗಳ ಜಾರಿಗಾಗಿ ಮತ್ತು ಎಲ್ಲಾ ನೌಕರರ ಕಾಯಂಮಾತಿಗಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಕೋಲಾರ ಜಿಲ್ಲಾ 3ನೇ ಸಮ್ಮೇಳನವು ಅ. 26 ರಂದು ನಗರದ ಕೆಇಬಿ ಸಮುದಾಯ ಭವನದಲ್ಲಿ ನಡೆಯಲಿದೆ. ಸಮ್ಮೇಳನವನ್ನು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ವಹಿಸುವವರರು. ಗ್ರಾಮ ಪಂಚಾಯಿತಿ  ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀನಿವಾಸ್ ತಿಳಿಸಿದ್ದಾರೆ.
ಇಂದು ಸುಗಮ ಸಂಗೀತ
ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಸಂಜೆ 6 ಗಂಟೆಗೆ ತಾಲೂಕಿನ ಧನಮಟ್ನಹಳ್ಳಿ ಗ್ರಾಮದಲ್ಲಿ ಸಂಜೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಜನಪದ ಗಾಯಕ ಜನಘಟ್ಟ ಕೃಷ್ಣಮೂರ್ತಿ ಮತ್ತು ತಂಡದವರಿಂದ ಜನಪದ ಗೀತಾ ಗಾಯನ ಹಾಗೂ ಬಿ.ಕೆ. ರೇಣುಕಾ ಮತ್ತು ತಂಡದಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ನೆರವೇರಿಸಲಿದ್ದು ತಾಲೂಕು ಕಸಾಪ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಮಾಜಿ ಅಧ್ಯಕ್ಷ ವಿ. ವೆಂಕಟಮುನಿಯಪ್ಪ, ಪಿ.ಮುನಿರೆಡ್ಡಿ, ಸಿ.ಜಿ. ಮುರಳಿ ಅತಿಥಿಗಳಾಗಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಬೇಸತ್ತು ಗೃಹಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಬುಕ್ಕನಹಳ್ಳಿ ರಸ್ತೆಯ ಸ್ವಾತಿ ಸ್ಕೂಲ್ ಬಳಿ ಗುರುವಾರ ಸಂಜೆ ನಡೆದಿದೆ. ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆ ಸ್ವಾತಿ ಸ್ಕೂಲ್ ಬಳಿ ಇರುವ ಮಂಜುಳ (25) ಎಂಬವರು ಜೀವನದಲ್ಲಿ ಬೇಸತ್ತು ನೇಣಿಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಬಿಜೆಪಿ ಚಿಂತಾಮಣಿ ಘಟಕದಿಂದ ಯುವಮೋರ್ಚಾ ಪದಾಧಿಕಾರಿಗಳನ್ನು ಕುರುಟಹಳ್ಳಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ. ಉಪಾಧ್ಯಕ್ಷ ಮಂಜುನಾಥರೆಡ್ಡಿ, ಶಿವಶಂಕರ್.ಕೆ, ಕಾರ್ಯದರ್ಶಿ ರವಿ, ಆನೇಗೌಡ, ಶ್ರೀಧರ್, ನಾಗರಾಜ್, ಕೋಶಾಧ್ಯಕ್ಷ ದೇವರಾಜ್, ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಅಂಬರೀಶ್, ಸುಬ್ರಮಣಿ, ಮಾದೇಶ್, ರಾಜಣ್ಣ, ಅಶೋಕ್, ನಾರಾಯಣರೆಡ್ಡಿ, ವಿ.ವಿ. ಶ್ರೀನಾಥ್, ಆಂಜಪ್ಪ, ಸತೀಶ್, ಶಿವಣ್ಣ, ಎನ್.ಜಿ. ವೆಂಕಟರವಣಪ್ಪ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement