ಚಿಂತಾಮಣಿ ತಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ನಾಗರಾಜ್
ಚಿಂತಾಮಣಿ: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಗೌರಮ್ಮ ನಾಗೇಶ್, ಉಪಾಧ್ಯಕ್ಷರಾಗಿ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಕೆ.ಟಿ. ಶಾಂತಲಾ ಹಾಗೂ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ಕುಮಾರ್ ಘೋಷಿಸಿದರು.
ಗುರುವಾರ ಬೆಳಿಗ್ಗೆ 9 ಗಂಟೆಗೆ ನಾಮಪತ್ರ ಸ್ವೀಕಾರ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಪರಿಶೀಲನೆ ನಾಮಪತ್ರ ವಾಪಸಿಗೆ 12.20 ಗಂಟೆವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಏಕೈಕ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಅನೂರು ಕ್ಷೇತ್ರದ ಗೌರಮ್ಮ ನಾಗೇಶ್ ಅಧ್ಯಕ್ಷರಾಗಿ ಮತ್ತು ಕೋಟಗಲ್ ಕ್ಷೇತ್ರದ ನಾಗರಾಜ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವುದಾಗಿ ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಉಪ ವಿಭಾಗದ ಕೆ.ಟಿ. ಶಾಂತಲಾ ಘೋಷಿಸಿದರು.
ಡಾ. ಸುಧಾಕರ್ ಅಭಿನಂದನೆ: ಪಟ್ಟಣದ ಮಾಳಪ್ಪಲ್ಲಿಯ ಅಂಜನಿ ನಿವಾಸದಲ್ಲಿ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಗೌರಮ್ಮ ನಾಗೇಶ್,ಉಪಾಧ್ಯಕ್ಷರಾಗಿ ನಾಗರಾಜಜ್ರವರನ್ನು ಹೂಮಾಲೆ ಹಾಕಿ ಶುಭ ಹಾರೈಸಿದರು. ನೀಡಿರುವ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಾಮಾಣಿಕವಾಗಿ ನ್ಯಾಯ ಕಲ್ಪಿಸಲು ಸೂಚಿಸಿದರು.
ವಿಜಯೋತ್ಸವ: ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಯಾದ ಕೂಡಲೇ ಪಟ್ಟಣದ ಜೋಡಿ ರಸ್ತೆ ಮುಖಾಂತರ ವಿಜಯೋತ್ಸವವನ್ನು ಆಚರಿಸಿ, ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ವಿಧಾನಪರಿಷತ್ ಮಾಜಿ ಸದಸ್ಯ ಸುಬ್ಬಾರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಲಕ್ಷ್ಮಿದೇವಕೋಟೆ ನಾರಾಯಣಸ್ವಾಮಿ, ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ, ಲಕ್ಷ್ಮಿರೆಡ್ಡಿ, ಸ್ಕೂಲ್, ಸುಲ್ತಾನ್ ಷರೀಫ್,ಕೋಡಿಗಲ್ ರೆಡ್ಡಪ್ಪ, ಮೀನಾಶ್ರೀರಾಮರೆಡ್ಡಿ, ಶೇಖರ್ ಬಾಬು, ಹಾದಿಗೆರೆ ಸುರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.