ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಜೀತ ಪದ್ಧತಿ ನಿರ್ಮೂಲನೆಗೆ ಸಹಕರಿಸಿ'

Vishwanath S
Updated On : 25 Oct 2013, 12:23 pm

ಚಿಂತಾಮಣಿ: ಅನಿಷ್ಟ ಜೀತ ಪದ್ಧತಿ ನಿರ್ಮೂಲನೆಗೊಂಡಾಗ ಮಾತ್ರ ಸಮಾಜ ನವ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದ ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀತದಾಳು ಜಾಗೃತಿ ದಿನಾಚರಣೆ ಅಂಗವಾಗಿ ಜೀತದಾಳುಗಳ ಬಿಡುಗಡೆ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವರಿಗೂ ಸಮಬಾಳು ಸರ್ವರಿಗೂ ಶಿಕ್ಷಣ ಎಂಬ ಡಾ.ಬಿ.ಆರ್. ಅಂಬೇಡ್ಕರ್‌ರವರ ಆದರ್ಶ, ತತ್ವ, ಸಿದ್ಧಾಂತಗಳು ಪ್ರತಿಯೊಬ್ಬ ಪ್ರಜೆಗೂ ಸಮಾನವಾಗಿ ಕಾಣುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ಜೀವಿಕ ರಾಜ್ಯ ಸಂಚಾಲಕ ಕಿರಣ್ ಕಮಲಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಸುಮಾರು 6 ಲಕ್ಷ ತನಕ ಜೀತದಾಳುಗಳು ವಿವಿಧ ಪ್ರದೇಶಗಳಲ್ಲಿ ದುಡಿಯುತ್ತಿದ್ದು, ಇವರಿಗೆ ಇಂದಿಗೂ ಸ್ವಾತಂತ್ರ್ಯ ದೊರೆಯದೆ ದುಡಿಯುತ್ತಿರುವುದಾಗಿ ಹೇಳಿದರು. ತಾಲೂಕಿನಲ್ಲಿ 273 ಜನ ಜೀತದಾಳು ವಿಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 929 ಜೀತದಾಳು ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ ಮಾತನಾಡಿ, ಜೀತದಾಳುಗಳಾಗಿ ಮುಕ್ತಿ ಹೊಂದಿರುವ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ದೊರೆಯುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಜೀತದಾಳುಗಳ ಬಿಡುಗಡೆ ಪತ್ರ ವಿತರಣೆಯನ್ನು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ತಾಲೂಕು ದಂಡಾಧಿಕಾರಿ ಮಂಜುನಾಥ್, ಜೀತ ವಿಮುಕ್ತಿಯ ರಾಜ್ಯ ಸಂಚಾಲಕ ಕಿರಣ್ ಕಮಲಪ್ರಸಾದ್ ವಿತರಣೆ ಮಾಡಿದರು. ಜೀವಿಕ ರಾಜ್ಯ ಸಂಘಟನ ಸಂಚಾಲಕ ವಿ. ಗೋಪಾಲ್, ತಾಲೂಕು ಸಂಚಾಲಕಿ ಸರಸ್ವತಮ್ಮ,  ತಾಲೂಕು ಸಂಚಾಲಕ ಎಂ.ಕೆ. ಚಂದ್ರು, ರವೀಂದ್ರಪ್ರಸಾದ್, ಕೃಷಿ ಕಾರ್ಮಿಕ ಒಕ್ಕೂಟದ ಲಕ್ಷ್ಮಿ ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement