ನಗರಾಭಿವೃದ್ಧಿ ನಿರ್ಲಕ್ಷ್ಯ: ಲೋಕಾ ಆಕ್ರೋಶ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ನಗರಸಭೆ ಮತ್ತು ಜನರಿಗೆ ಸಮರ್ಪಕವಾಗಿ ಸೇವೆಯನ್ನು ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಇಲ್ಲಿನ ತಾಲೂಕು ಕಚೇರಿಯ ಕಾರ್ಯ ವೈಖರಿಯ ಬಗ್ಗೆ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಹುತೇಕ ಲೋಕಾಯುಕ್ತರಿಗೆ ಸಾರ್ವಜನಿಕರು ಸಲ್ಲಿಸುವ ದೂರುಗಳು ಹೆಚ್ಚಿಗೆ ನಗರಸಭೆ ಮತ್ತು ತಾಲೂಕು ಕಚೇರಿಗೆ ಸಂಬಂಧಪಟ್ಟಿರುತ್ತವೆ. ಜನರ ಸಣ್ಣಪುಟ್ಟ ಕೆಲಸಗಳೂ ತ್ವರಿತವಾಗಿ ಮುಗಿಯದೇ ದೂರುಗಳು ಲೋಕಾಯುಕ್ತರ ಬಳಿಗೆ ವ್ಯಾಪಕವಾಗಿ ಬರುತ್ತಿರುವುದು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಪ್ರಶ್ನಿಸಬೇಕಾದಂತಹ ಪರಿಸ್ಥಿತಿ ಬಂದಿದೆ ಎಂಬ ಅಸಮಾಧಾನ ವ್ಯಕ್ತವಾಯಿತು.
ನಗರದ ತಾ.ಪಂ. ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಯಿತು. ಸಭೆಯಲ್ಲಿ ಬಹುತೇಕರು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ರಸ್ತೆಗಳು ಹದಗೆಟ್ಟು ಸಂಚರಿಸಲು ಅಸಹ್ಯಪಡುವಷ್ಟರ ಮಟ್ಟಿಗೆ ಇದೆ.
ಯಾವ ರಸ್ತೆಯೂ ಸರಿಯಾಗಿಲ್ಲ. ಎಲ್ಲಾ ಗುಂಡಿಗಳಿಂದ ತುಂಬಿ ತುಳುಕಾಡುತ್ತಿದ್ದು ಮಳೆ ಬಿದ್ದ ಸಂದರ್ಭದಲ್ಲಿ ರಸ್ತೆಗಳಲ್ಲಿ ನೀರು ನಿಂತುಕೊಂಡಿರುತ್ತದೆ. ಇಷ್ಟಾದರೂ ಸಹ ನಗರಸಭೆ ಗಮನಹರಿಸದ ಕಾರಣ ತುಂಬಾ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದರು.
ಇಷ್ಟು ನಿರ್ಲಕ್ಷ್ಯನಾ?: ಚಿಕ್ಕಬಳ್ಳಾಪುರದಲ್ಲಿ ಪ್ರತಿ ಸಲ ಸಾರ್ವಜನಿಕರ ಅಹವಾಲು ಸಭೆಯನ್ನು ನಡೆಸಿದ ಸಂದರ್ಭದಲ್ಲಿ ನಗರದಲ್ಲಿನ ರಸ್ತೆಗಳು ಹದಗೆಟ್ಟರೂ ರಿಪೇರಿಯಾಗದ ಬಗ್ಗೆ ದೂರುಗಳು ಪ್ರಸ್ತಾಪವಾಗುತ್ತಿರುತ್ತದೆ. ಈ ಹಿಂದೆ ವರ್ಷಕ್ಕೊಮ್ಮೆಯಾದರೂ ಒಂದೊಂದು ರಸ್ತೆಯನ್ನು ಸಮರ್ಪಕವಾಗಿ ಸರಿಪಡಿಸಿದ್ದರೆ ಸಮಸ್ಯೆಯೇ ಕಂಡು ಬರುತ್ತಿರಲಿಲ್ಲ. ಆದರೆ, ಕಳೆದ ಕೆಲ ವರ್ಷಗಳಿಂದ ನಿರ್ಲಕ್ಷ್ಯ ವಹಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿ ರಸ್ತೆ ಸಮಸ್ಯೆಗಳು ದೊಡ್‌ಡದಾಗಿವೆ.ನಗರಸಭೆ ಇಷ್ಟು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಲೋಕಾಯುಕ್ತ ಇನ್ಪೆಕ್ಟೆರ್ ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ದೂರುಗಳನ್ನು ಸಾರ್ವಜನಿಕರು ಅಹವಾಲು ಸಭೆಯಲ್ಲಿ ಸಲ್ಲಿಸಬಾರದು.
ಯಾವುದೇ ಪ್ರಕರಣದ ಬಗ್ಗೆ ದೂರು ನೀಡುವಾಗ ಎಚ್ಚರಿಕೆಯಿಂದರಬೇಕು. ದೂರಿನಲ್ಲಿ ವಾಸ್ತವಾಂಶವಿರಬೇಕಲ್ಲದೇ ಅದು ನಿರ್ದಿಷ್ಟವಾಗಿರಬೇಕು. ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಅನಗತ್ಯ ಹಿಂಸೆ, ಕಿರುಕುಳ ನೀಡಿದರೆ,ಇಲ್ಲವೇ ಲಂಚಕ್ಕಾಗಿ ಪೀಡಿಸುತ್ತಿದ್ದರೆ ದೂರನ್ನು ನೀಡಬೇಕು. ಅದು ಬಿಟ್ಟು ಕೇವಲ ಕೆಲವರನ್ನು ಗುರಿಯನ್ನಾಗಿಸಿಕೊಂಡು ಆರೋಪಕ್ಕಾಗಿ ದೂರುವುದು ಬೇಡ. ಬಹುಮುಖ್ಯವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರ ಪ್ರಕರಣದ ಬಗ್ಗೆ ದೂರನ್ನು ಸಲ್ಲಿಸಬಾರದೆಂದು ಸಲಹೆ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯ, ಇನ್ಸೆಪೆಕ್ಟರ್ ಅಶೋಕ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.