ನಿಷೇಧದ ನಡುವೆಯೂ ಜೀತ ಪದ್ಧತಿ ಜೀವಂತ
ಚಿಕ್ಕಬಳ್ಳಾಪುರ: ಸರ್ಕಾರದ ನಿಷೇಧದ ನಡುವೆಯೂ ಜೀತ ಪದ್ಧತಿ ಎಲ್ಲೆಡೆ ತಾಂಡವವಾಡುತ್ತಲೇ ಇದೆ. ಜೀತ ವಿಮುಕ್ತರಾದವರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಮರ್ಪಕವಾಗಿ ಒದಗಿಸದೇ ನಿರ್ಲಕ್ಷ್ಯ ವಹಿಸಿಕೊಂಡು ಬರಲಾಗುತ್ತಿದೆ ಎಂದು ಆರೋಪಿಸಿ ಜೀವಿಕ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿ ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಜೀತದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಇದು ಸರ್ಕಾರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ತಂದಿದ್ದರೂ ಅನಿಷ್ಟ ಜೀತ ಪದ್ಧತಿ ಜೀವಂತವಾಗಿರುವುದಕ್ಕೆ ನಿದರ್ಶನವಾಗಿದೆ. ಜಿಲ್ಲೆಯಲ್ಲಿ 2013ನೇ ಇಸವಿಯಲ್ಲಿ 247 ಜೀತದಾಳುಗಳನ್ನು ಗುರುತಿಸಲಾಗಿದ್ದು ಇವರಿಗೆ ಬಿಡುಗಡೆ ಪತ್ರಗಳನ್ನು ನೀಡಬೇಕಾಗಿದೆ. ಅಲ್ಲದೇ ತ್ವರಿತವಾಗಿ ಪುನರ್ವಸತಿ ಸೇರಿದಂತೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವವನ್ನು ಜೀವಿಕ ಸಂಘಟನೆಯ ಮಹಿಳಾ ಸಂಚಾಲಕಿ ರತ್ನಮ್ಮ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ವಹಿಸಿದ್ದರು.
ಬಾಗೇಪಲ್ಲಿಯಲ್ಲೂ ಪ್ರತಿಭಟನೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಸಂಘಟನೆಯ ಬಾಗೇಪಲ್ಲಿ ತಾಲೂಕು ಘಟಕದ ಕಾರ್ಯಕರ್ತರು ಗೂಳೂರು ಸರ್ಕಲ್ನಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು. ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಜೀತ ಪದ್ಧತಿ ಕಾಯ್ದೆ ಜಾರಿಗೆ ಬಂದು 37 ವರ್ಷ ಕಳೆದರೂ ಇದುವರೆಗೂ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿಯೇ ಅತಿ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿರುವ ಬಾಗೇಪಲ್ಲಿ ತಾಲ್ಲೂಕು ಆಂಧ್ರಪ್ರದೇಶದ ಗಡಿ ಭಾಗದಲ್ಲಿದ್ದು ಭೂಮಾಲೀಕರ ಮತ್ತು ಬಲಾಡ್ಯರಿಂದ ಅನೇಕ ವರ್ಷಗಳಿಂದ ದೀನ ದಲಿತರು ಅವಕಾಶಗಳಿಂದ ವಂಚಿತರಾಗಿ ಶೋಷಣೆ ಮತ್ತು ದೌರ್ಜನ್ಯಗಳಿಗೆ ಒಳಗಾಗಿದ್ದು ಜೀತದಾಳುಗಳ ಬದುಕು ದುಸ್ಥಿತಿಯಲ್ಲಿದೆ. ಜೀವಿಕ ಸಂಘಟನೆ ವತಿಯಿಂದ ತಾಲೂಕಿನಲ್ಲಿ ಸುಮಾರು 480 ಕ್ಕೂ ಅಧಿಕ ಜೀತದಾಳುಗಳನ್ನು ಗುರುತಿಸಲಾಗಿದೆ.ಆದರೆ ಜೀತದಾಳಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದು ಈಗಾಗಲೇ ಗುರುತಿಸಿರುವಂತಹ ಜೀತದಾಳುಗಳ ಪೈಕಿ ಅರ್ಧ ಭಾಗದಷ್ಟು ಜೀತ ಮುಕ್ತರಿಗೆ ಮಾತ್ರ ಅಲ್ಪ ಪ್ರಮಾಣದ ಪರಿಹಾರವನ್ನು ನೀಡಿ ಕೈ ತೊಳೆದುಕೊಂಡಿದ್ದಾರೆಂದು ಆರೋಪಿಸಿದರು. ಧರಣಿಯಲ್ಲಿ ಅಧ್ಯಕ್ಷ ಆದಿನಾರಾಯಣಪ್ಪ, ಉಪಾಧ್ಯಕ್ಷ ಕೋತ್ತಕೋಟ ಅಂಜಿನಪ್ಪ, ಕಾರ್ಯದರ್ಶಿ ಪೆದ್ದನ್ನ, ಶ್ರೀರಾಮನಾಯ್ಕ್, ತಾ.ಮಹಿಳಾ ಸಂಚಾಲಕಿ ವಿ. ಸೋಮವತಿ, ಚೇಳೂರು ಬಾಬು, ವೆಂಕಟೇಶ್, ಶಿವಣ್ಣ ಭಾಗವಹಿಸಿದ್ದರು.