ಏಕಮುಖ ಸಂಚಾರ ವ್ಯವಸ್ಥೆ ಜಾರಿಗಾಗಿ ಸಮಾಲೋಚನೆ
ಕ.ಪ್ರ.ವಾರ್ತೆ , ಕೋಲಾರ , ಅ.27
ಜನಸಂಖ್ಯೆ ಹೆಚ್ಚಳ, ವಾಹನಗಳ ಅಡ್ಡಾದಿಡ್ಡಿ ಸಂಚಾರ, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಫುಟ್ ಪಾತ್ಗಳ ಒತ್ತುವರಿ ವಿಚಾರವಾಗಿ ಭಾನುವಾರ ನಗರದ ಕನಕ ಮಂದಿರದಲ್ಲಿ ವಿವಿಧ ಸ್ತರಗಳ ಜನರೊಂದಿಗೆ ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸಿದರು.
ನಗರದಲ್ಲಿ ಸಂಚಾರಿ ವ್ಯವಸ್ಥೆ ಸುಗಮಗೊಳ್ಳಲು ಕೆಲವು ಮಾರ್ಗಗಳನ್ನು ಪ್ರಾಯೋಗಿಕವಾಗಿ ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸುತ್ತಿದ್ದು, ಸಾಧಕ-ಬಾಧಕಗಳ ಪರಿಶೀಲನೆ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಡಿವೈಎಸ್ಪಿ ಅಶೋಕ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ವರ್ತಕರು, ಆಟೋ, ಕಾರು, ಲಾರಿ ಮತ್ತಿತರ ವಾಹನಗಳ ಚಾಲಕರು ಹಾಗೂ ನಾಗರಿಕರು ಭಾಗವಹಿಸಿ ಸಲಹೆಗಳನ್ನು ನೀಡಿದರು. ಜನತೆಯ ಅನುಕೂಲಕ್ಕಾಗಿ ಸಂಚಾರ ನಿಯಮಗಳು ಅತ್ಯಗತ್ಯವಾಗಿರುವುದರಿಂದ ಯಾವುದೇ ವಿರೋಧ, ಭಿನ್ನಮತವಿಲ್ಲದೆ ನಿಯಮಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕೆಂದು ಡಿವೈಎಸ್ಪಿ ಅಶೋಕ್ ಕುಮಾರ್ ತಿಳಿಸಿದರು.
ಸರಕು ಸಾಗಾಣೆ ಲಾರಿಗಳು ಎಂಜಿ ರಸ್ತೆ, ದೊಡ್ಡಪೇಟೆ ಕಾಳಮ್ಮ ಗುಡಿ ಬೀದಿಗೆ ಬೆಳಗ್ಗೆ 8.30 ರಿಂದ ರಾತ್ರಿ 8 ಪ್ರವೇಶ ಮಾಡುವುದನ್ನು ಸುಗಮ ಸಂಚಾರದ ದೃಷ್ಟಿಯಿಂದ ನಿಷೇಧಿಸುವುದು ಅನಿವಾರ್ಯ ಎಂದು ಸಭೆಗೆ ತಿಳಿಸಿದ ಅವರು, ವರ್ತಕರ ಸಂಘದ ಉಪಾಧ್ಯಕ್ಷ ಚಲಪತಿ ಅವರು ಸರಕು ಸಾಗಾಣೆ ಲಾರಿಗಳ ಪ್ರವೇಶಕ್ಕೆ ಬೆಳಗ್ಗೆ 10 ಗಂಟೆವರೆಗೂ ಅವಕಾಶ ನೀಡುವಂತೆ ಕೋರಿದಾಗ ಡಿವೈಎಸ್ಪಿ ನಿರಾಕರಿಸಿದರು.
ಸರಕುಸಾಗಾಣೆ ವಾಹನಗಳ ಚಾಲಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು ಒಂದು ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಕೆಲವರು ವೈಯುಕ್ತಿಕವಾದ ಸಮಸ್ಯೆ ಹೇಳಿಕೊಂಡಾಗ, ಸದರಿ ಸಭೆಯನ್ನು ಸಮಸ್ತ ಜನತೆಯ ಹಿತಕ್ಕಾಗಿ ನಡೆಸುತ್ತಿರುವುದರಿಂದ ವೈಯುಕ್ತಿಕ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಬೇಡಿ ಎಂದು ಸಲಹೆ ನೀಡಿದರು.
ಆಟೋ ಚಾಲಕರು ಅಮ್ಮವಾರಿಪೇಟೆ, ದೊಡ್ಡಪೇಟೆ, ಕಾಳಮ್ಮ ಗುಡಿ ರಸ್ತೆ ಮತ್ತಿತರೆಡೆ ಪುಟ್ ಪಾತ್ ಒತ್ತುವರಿ, ರಸ್ತೆ ಬದಿ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್ನಿಂದ ಸಮಸ್ಯೆಯಾಗುತ್ತಿರುವ ಕುರಿತು ಗಮನ ಸೆಳೆದಾಗ ನಗರಸಭೆ ಆರ್.ಐ ಚಲಪತಿ ನವೆಂಬರ್ 2 ರ ನಂತರ ಏಕಮುಖ ಸಂಚಾರದ ರಸ್ತೆಗಳಲ್ಲಿ ಪುಟ್ಪಾತ್ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದರು.
ಆಟೋ ರಿಕ್ಷಾ ಪ್ರಯಾಣ ದರ ಸಾಮಾನ್ಯ ಕನಿಷ್ಠ 20 ಇದ್ದು ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗಿರುವುದರಿಂದ ದರ ಪರಿಷ್ಕಣೆ ಮಾಡುವಂತೆ ಆಟೋ ಚಾಲಕರು ಮನವಿ ಮಾಡಿದರು.
ಈಗಾಗಲೇ ದೊಡ್ಡಪೇಟೆ ರಸ್ತೆ, ಕಾಳಮ್ಮ ಗುಡಿ, ಎಂ.ಜಿ ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಸೂಚಿಸಿದ್ದರೂ, ಸಿಬ್ಬಂದಿ ಕೊರತೆಯಿಂದಾಗಿ ಅದರ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಡಿವೈಎಸ್ಪಿ ಅವರು, ಗಾಂಧಿವನದಿಂದ ಅಮ್ಮವಾರಿಪೇಟೆ ವೃತ್ತದ ಕಡೆಗೆ ಏಕಮುಖ ರಸ್ತೆ ಬದಲಾವಣೆಗೆ ಬಂದ ಮನವಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶಾರದಾ ಟಾಕೀಸ್ ರಸ್ತೆಯಲ್ಲಿ ನರ್ಸಿಂಗ್ ಹೋಂಗಳ ಮುಂಭಾಗ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಎಂ.ಬಿ.ರಸ್ತೆಯಲ್ಲಿ ದ್ವಿಚಕ್ರವಾಹನ ವರ್ಕ್ ಶಾಪ್ಗಳವರು ರಸ್ತೆಯಲ್ಲೇ ವಾಹನಗಳ ರಿಪೇರಿ ನಡೆಸುವುದರಿಂದಲೂ, ಎಸ್ಬಿಎಂ ಬ್ಯಾಂಕ್ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಸಮಸ್ಯೆಯಾಗುತ್ತಿದೆ ಎಂದು ಕೆಲವರು ಸಭೆಯ ಗಮನಕ್ಕೆ ತಂದರು.
ಮೆಕ್ಕೆ ವೃತ್ತ ಹಾಗೂ ಬಂಗಾರಪೇಟೆ ವೃತ್ತದಲ್ಲಿ ಖಾಸಗಿ ಬಸ್ಸುಗಳವರು, ಹೆಚ್ಚಿನ ವೇಳ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಸೆಳೆಯುವ ಕೆಲಸ ಮಾಡುವುದರಿಂದ ಅಲ್ಲಿಯೂ ಸಮಸ್ಯೆಯಾಗುತ್ತಿದೆ ಎಂದು ಸಭೆಗೆ ಬಂದಿದ್ದವರು ದೂರಿದರು.
ಆಟೊ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಸೂಕ್ತ ದಾಖಲೆ, ಪರವಾನಗಿ ಹೊಂದಿರಬೇಕು, ಚಾಲಕರ ಸೀಟಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಕೇಸು ಹಾಕಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಅದೇ ರೀತಿ ಸರ್ಕಾರಿ ಬಸ್ಸು ಚಾಲಕ ಮತ್ತು ಕಂಡೆಕ್ಟರ್ ಪಾವಿಸದಿದ್ದರೂ ಕ್ರಮ ತೆಗೆದುಕೊಳ್ಳುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಿದರು.
ನಗರ ವೃತ್ತ ನಿರೀಕ್ಷಕ ಶಿವಕುಮಾರ್, ಪಿಎಸ್ಐ ಸುಧಾಕರ ರೆಡ್ಡಿಸಂಚಾರಿ ಪಿಎಸ್ಐ ಜಗದೀಶ್ ಮತ್ತಿತರರು ಇದ್ದರು.