ಕೃಷಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕೊರತೆ
ಚಿಂತಾಮಣಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕೊರತೆಯಿಂದ ಹಂದಿಗಳ ತಾಣವಾಗಿ ನಿರ್ಮಾಣಗೊಂಡಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಹಲವು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದ್ದರೂ ಜಾಣ ಕುರುಡರಾಗಿರುವ ಕಾರ್ಯವೈಖರಿ ಬಗ್ಗೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶದಿಂದ ವಿವಿಧ ತರಕಾರಿ ಹಾಗೂ ಧವಸ ಧಾನ್ಯಗಳನ್ನು ತರುವ ರೈತರಿಗೆ ದಿನ ನಿತ್ಯ ಗೊಬ್ಬುನಾತದಿಂದ ಓಡಾಡಲು ಕಷ್ಟವಾಗಿದೆ. ಮಾರುಕಟ್ಟೆ ಸ್ವಚ್ಛತೆಗಾಗಿ ಸಾವಿರಾರು ರುಪಾಯಿ ತಿಂಗಳ ಬಿಲ್ ಪಡೆಯುವ ಗುತ್ತಿಗೆದಾರ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ರೈತರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಇಂದು ವಿಚಾರ ಸಂಕಿರಣ
ಕೋಲಾರ: ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಅ.28 ರಂದು ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಅಂತರ್ಜಲ ಸಂರಕ್ಷಣೆ-ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಪಾತ್ರ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿಚಾರ ಸಂಕಿರಣವನ್ನು ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಆರೋಗ್ಯ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ. ಶಾಸಕ ವರ್ತೂರು ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ನಾಳೆ ಕಾರ್ಯಾಗಾರ
ಚಿಕ್ಕಬಳ್ಳಾಪುರ: ಪತ್ರಿಕಾ ದಿನಾಚರಣೆ ಪ್ರಯುಕ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅ.29 ರಂದು ಬೆಳಗ್ಗೆ 9.30 ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾಷಾ ಪತ್ರಿಕೋದ್ಯಮದ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಜಿಲ್ಲಾಧ್ಯಕ್ಷ ಎಂ. ಜಯರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಂಘದ ಅಧ್ಯಕ್ಷ ಗಂಗಾಧರ್ ಮೊದಲಿಯಾರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎ. ಕವನ ಭಾಗವಹಿಸಲಿದ್ದಾರೆ. ಬಳಿಕ ಪತ್ರಿಕೋದ್ಯಮದಲ್ಲಿ ಭಾಷಾ ಪ್ರಯೋಗ ಕುರಿತು ಪ್ರಜಾವಾಣಿ ಆನ್ ಲೈನ್ ಸಂಪಾದಕ ಮಹಮದ್ ಇಸ್ಮಾಯಿಲ್, ಗಡಿ ಭಾಷೆ ಮತ್ತು ವರದಿಗಾರಿಕೆ ಕುರಿತು ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಹಾಗೂ ಕನ್ನಡಪ್ರಭ ಮುಖ್ಯ ವರದಿಗಾರ ಕೆ.ವಿ. ಪ್ರಭಾಕರ್, ದೃಶ್ಯ ಮಾಧ್ಯಮ ಮತ್ತು ಭಾಷೆ ಕುರಿತು ಉದಯ ನ್ಯೂಸ್ ಸುದ್ದಿ ಸಂಪಾಕದ ಪ್ರಕಾಶ್ ಚಂದ್ರ ಹಾಗೂ ನ್ಯಾಯಾಲಯ ಮತ್ತು ಅಪರಾಧ ವರದಿಗಾರಿಕೆ ಕುರಿತು ಹೊಸದಿಗಂತ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಪಿ. ರಾಜೇಂದ್ರ ಉಪನ್ಯಾಸ ನಡೆಸಿಕೊಡಲಿದ್ದಾರೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಾಗಾರದ ಅರ್ಹತಾ ಪತ್ರ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸದಸ್ಯರಿಗೆ ಸಂಘದಿಂದ ಮಾಡಿಸಿರುವ ಗುಂಪು ವಿಮೆ ಪತ್ರ ಹಾಗೂ ತಾಲೂಕು ಸಂಘಗಳಿಗೆ ಕ್ರೀಡಾ ಕಿಟ್ ತರಿಸಲಾಗುವುದು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾಗಾರ
ಮಾಲೂರು: ತಾಲೂಕು ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡುವ ಕಾರ್ಯಾಗಾರವನ್ನು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ತಾಲೂಕಿನಲ್ಲಿರುವ ಲಕ್ಕೂರು, ಟೇಕಲ್, ಮಾಸ್ತಿ ಹಾಗೂ ಕಸಬಾ ಹೋಬಳಿಗಳ ಮತಗಟ್ಟೆ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ವೆಂಕಟೇಶ್ ಮುಂಬರಲಿರುವ ಚುನಾವಣೆಯನ್ನು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಲೋಪದೋಷಗಳು ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು. ಸಹಾಯಕ ಪ್ರಾದೇಶಿಕ ಆಯುಕ್ತ ಮಂಜುನಾಥ್, ತಾಲೂಕು ಚುನಾವಣಾ ಇಲಾಖೆಯ ಅಧಿಕಾರಿ ಮುನೇಶ್ವರಚಾರಿ, ಉಪನ್ಯಾಸಕ ಆನಂತಮೂರ್ತಿ, ಮುನಿರಾಜು ಇದ್ದರು.