ನೋಡಿಸ್ವಾಮಿ ಕೋಲಾರ ಇರೋದೆ ಹೀಗೆ!
ಕ.ಪ್ರ.ವಾರ್ತೆ , ಕೋಲಾರ , ಅ.26
ಸುಮಾರು 1.60 ಲಕ್ಷ ಜನಸಂಖ್ಯೆ ಹೊಂದಿರುವ ಕೋಲಾರ ನಗರ ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿಲ್ಲ.
ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಇದಕ್ಕೆ ರಾಜ ಕಾಲುವೆಗಳ ಒತ್ತುವರಿ ಹಾಗೂ ಸ್ವಚ್ಛತೆಯ ಸಮಸ್ಯೆ ಕಾರಣವೆಂದು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದರಿಂದ ಕೊಂಚ ಸುಧಾರಣೆ ಕಂಡು ಬಂದಿದೆಯಾದರೂ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡದಿರುವುದರಿಂದ ಹಾಗೂ ಅಡ್ಡಾದಿಡ್ಡಿಯಾಗಿ ಮನೆಗಳನ್ನು ನಿರ್ಮಿಸಿ ಅಭಿವೃದ್ಧಿಗೆ ಮಾರಕವಾಗಿರುವುದರಿಂದ ಸಮಸ್ಯೆಗಳು ಹಾಗೆಯೇ ಉಳಿದಿವೆ.
ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಕಾಲು ದಾರಿ ಸಹಿತ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿರುವುದರಿಂದ ಪರಿಸರ ಸಂರಕ್ಷಣೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅಭಿವೃದ್ಧಿ ಕಾಣದ ದೊಡ್ಡ ಹಳ್ಳಿಯಂತಿರುವ ಕೋಲಾರ ನಗರ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ವಿನ್ಯಾಸಗೊಳ್ಳಬೇಕಾದರೆ ಜನತೆಯ ಸಹಕಾರ ಮುಖ್ಯವಾಗಿದೆ.
ಮನೆಗಳ ಮುಂದಿನ ಚರಂಡಿಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಇತರ ತ್ಯಾಜ್ಯಗಳನ್ನು ಎಸೆಯದಂತೆ ನಗರಸಭೆಯವರು ನಿರಂತರವಾಗಿ ಅರಿವು ಮೂಡಿಬೇಕು, ಸೂಚನೆಗಳನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕು, ಸಂಬಂಧಪಟ್ಟ ವಾರ್ಡುಗಳ ಸದಸ್ಯರ ಮೂಲಕ ಆಯಾ ವಾರ್ಡುಗಳಲ್ಲಿ ಶ್ರಮದಾನ ಮಾಡಿಬೇಕು. ಒತ್ತುವರಿ ತೆರವು ಮಾಡಿಸಿ ನಗರಸಭೆಯ ಆಸ್ತಿಗಳ ಸಂರಕ್ಷಣೆಯ ಜೊತೆಗೆ ಜನತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಕೋಲಾರ ನಗರ ಜನಸಂಖ್ಯೆ ಹೆಚ್ಚಳದಲ್ಲಿ ದಾಖಲೆ ನಿರ್ಮಿಸುತ್ತದೆಯೇ ಹೊರತು ಅಭಿವೃದ್ಧಿ ಸಾಧಿಸಲಾಗದು.