ಪದವೀದರರ ಕ್ಷೇತ್ರಕ್ಕೆ ಸ್ಪರ್ಧಿಸಲು ಸಿದ್ಧತೆ
ಚಿಂತಾಮಣಿ: ರಾಯಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ರಾಮಕೃಷ್ಣಾರೆಡ್ಡಿ ವಿಧಾನಪರಿಷತ್ತಿನ ಪದವಿದರರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಯುತ್ತಿದೆ. ಪಟ್ಟಣದ ಪ್ರತಿಷ್ಠಿತ ರಾಯಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ರಾಯಲ್ ರಾಮಕೃಷ್ಣಾರೆಡ್ಡಿ ತಮ್ಮ ಅಭಿಮಾನಿಗಳ ಸಭೆ ಸೇರಿಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಂತರ ಇವರು ತಮ್ಮ ಬೆಂಬಲಿಗರ ಜೊತೆ ಮುಳಬಾಗಿಲು ತಾಲೂಕಿನ ಕುರುಮಲೆ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನರೆಡ್ಡಿ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್. ವೆಂಕಟರವಣಾರೆಡ್ಡಿ, ಸರ್ಕಾರಿ ಗೃಹ ನಿರ್ಮಾಣ ನೌಕರರ ಸಂಘದ ಅಧ್ಯಕ್ಷ ಪ್ರಕಾಶರೆಡ್ಡಿ ಸಾಥ್ ನೀಡಲಿದ್ದಾರೆ.
ಚಿರತೆಗಳ ಹಾವಳಿ: ಆತಂಕದಲ್ಲಿ ಗ್ರಾಮಸ್ಥರು
ಕೋಲಾರ: ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಧನಮಟ್ನಹಳ್ಳಿ ಸಮೀಪದ ಬೆಟ್ಟ ಗುಡ್ಡಗಳಲ್ಲಿ ನಾಲ್ಕೈದು ಚಿರತೆಗಳು ಒಮ್ಮೆಗೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ತಮ್ಮ ಮನೆಯ ಮುಂದೆ ಇರುವ ಕೊಟ್ಟಿಗೆಗಳಲ್ಲಿ ಕಟ್ಟಿ ಹಾಕಿರುವ ಹಸು, ಮೇಕೆ, ಕುರಿಗಳನ್ನು ರಕ್ಷಣೆ ಮಾಡಲು ಪರದಾಡುತ್ತಿದ್ದಾರೆ. ಬೆಟ್ಟದ ಮೇಲೆ ಕಾಣಿಸಿಕೊಂಡಿರುವ ಚಿರತೆಗಳನ್ನು ನೋಡಲು ಗ್ರಾಮಸ್ಥರು ಜಾತ್ರೆ ರೀತಿಯಲ್ಲಿ ಸೇರಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಗಳ ತಂಟೆಗೆ ಹೋಗದಂತೆ ಜನತೆಯಲ್ಲಿ ಮನವಿ ಮಾಡಿದ್ದಾರಲ್ಲದೆ, ಸುರಕ್ಷಿತ ಸ್ಥಳಕ್ಕೆ ಓಡಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜನಾಂದೋಳನ ಕಾರ್ಯಕ್ರಮ
ಶಿಡ್ಲಘಟ್ಟ: ಬಿಜೆಪಿ ಕಾರ್ಯಕರ್ತರು ಜನಾಂದೋಳನ ಕಾರ್ಯಕ್ರಮವನ್ನು ಜೆ. ವೆಂಕಟಾಪುರದಲ್ಲಿ ಮನೆ ಮನೆಗೆ ಕರಪತ್ರಗಳನ್ನು ಹಂಚುವುದರ ಮೂಲಕ ಪ್ರಾರಂಬಿಸಿದರು. ಬಿಜೆಪಿ ಪಕ್ಷದ ಯೋಜನೆಗಳ ಬಗ್ಗೆ ಹಾಗೂ ಆಡಳಿತ ಪಕ್ಷದ ಹಗರಣಗಳ ಬಗ್ಗೆ ಜನಾಂದೋಳನ ಕಾರ್ಯಕ್ರಮವನ್ನು ವಾರಕ್ಕೊಮ್ಮೆ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಜೆ. ವೆಂಕಟಾಪುರದ ಮೂಲಕ ಪ್ರಚಾರ ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಗೌಡ, ಸದಾಶಿವ, ಶ್ರೀದರ್, ರಾಮಚಂದ್ರ, ನರಸಿಂಹಪ್ಪ ಪಾಲ್ಗೊಂಡಿದ್ದರು.
ಕೋಳಿ ಸಾಕಾಣಿಕೆ ರೈತರ ಸಮಾವೇಶ
ಮಾಲೂರು: ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಅವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಸಮಾವೇಶದಲ್ಲಿ ಭಾಗವಹಿಸಲು ತಾಲೂಕಿನಿಂದ ಹತ್ತು ಸರ್ಕಾರಿ ಬಸ್ಗಳಲ್ಲಿ ರೈತರು ತೆರಳಿದರು.
ಬೆಂಗಳೂರಿಗೆ ತೆರಳುವ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ವೆಂಕಟೇಶ್ವರಕೋಳಿ ಸಾಕಾಣಿಕೆ ಕೇಂದ್ರದ ವ್ಯವಸ್ಥಾಪಕ ಭೈಯಾರೆಡ್ಡಿ, ವಿವಿಧ ರೋಗಗಳಿಗೆ ತುತ್ತಾಗುತ್ತಿರುವ ಕೋಳಿಗಳಿಂದಾಗಿ ಕುಕ್ಕುಟ ಉದ್ಯಮ ಸಂಕಷ್ಟದಲ್ಲಿದೆ. ಬ್ಯಾಂಕ್ಗಳು ಸಾಲ ನೀಡುತ್ತಿಲ್ಲ. ಸರ್ಕಾಕ ಸಬ್ಸಿಡಿ ನೀಡುವ ಪ್ರಶ್ನೆಯೇ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೋಳಿ ಸಾಕಾಣಿಕೆ ಉದ್ಯಮ ಉಳಿಸಲು ಹಲವು ಕ್ರಮಗಳನ್ನು ಕೈಗೊಂಡು ಸೌಲಭ್ಯ ಕಲ್ಪಿಸಬೇಕು ಎಂದರು. ಮಹೇಶ್, ರಘು, ಮಂಜುನಾಥ್, ವೆಂಕಟಾ ಚಲಪತಿ ಸೇರಿದಂತೆ ನೂರಾರು ಕೋಳಿ ಸಾಕಾಣಿಕೆ ರೈತರು ಇದ್ದರು.
ಉಪಗ್ರಹ ಆಧಾರಿತ ಸಂವಹನ ಕಾರ್ಯಕ್ರಮ
ಮಾಲೂರು: ತಾಪಂ ಸೌಮರ್ಥ್ಯ ಸೌಧದಲ್ಲಿ ಉಪಗ್ರಹ ಆಧಾರಿತ ಸಂವಹನ ಕಾರ್ಯಕ್ರಮವನ್ನು ಎರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ 7 ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಸರ್ಕಾರದ ಸಾಧನೆ ಬಿಂಬಿಸುವ 15 ಕೈಪಿಡಿಯ ಬಿಡುಗಡೆ ಸಮಾರಂಭದ ನೇರ ಪ್ರಸಾರದ ಕಾರ್ಯಗಾರದಲ್ಲಿ ತಾಪಂಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ ಸೇರಿದಂತೆ ತಾಪಂ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ನೋಡಲ್ಅಧಿಕಾರಿ ಆರೋಗ್ಯ ಸ್ವಾಮಿ, ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ್, ಬದ್ರಿನಾಥ್, ಜಿಪಂ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಯಶೋಧಮ್ಮ ಕೃಷ್ಣಮೂರ್ತಿ, ನಾಗೇಶ್ ಇದ್ದರು.
ಕತ್ತು ಕೊಯ್ದು ವ್ಯಕ್ತಿ ಕೊಲೆ
ಟೇಕಲ್: ಅಪರಿಚಿತ ವ್ಯಕ್ತಿಯೊಬ್ಬರನ್ನು ಕತ್ತು ಕೊಯ್ದು, ಹೊಟ್ಟೆಗೆ ಇರಿದು ಬರ್ಭರವಾಗಿ ಕೊಲೆ ಮಾಡಿ ಶವವನ್ನು ಮೂಟೆ ಕಟ್ಟಿ ಸಮೀಪದ ದಾಸರಹಳ್ಳಿಯ ಗೋವಿಂದಪ್ಪ ಎಂಬವರ ಜಮೀನಿನಲ್ಲಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ದನಕಾಯುವವರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದಾವಿಸಿದ ಟೇಕಲ್ ಮತ್ತು ಮಾಸ್ತಿ ಪೊಲೀಸರು ಮೂಟೆ ಬಿಚ್ಚಿ ಪರಿಶೀಲನೆ ನಡೆಸಿದ್ದು, ಸುಮಾರು 28 ರಿಂದ 31 ವರ್ಷದೊಳಗಿನ ಗಂಡಸಿನ ಶವ ಇದ್ದು, ಮೂಟೆಯನ್ನು ಸೀರೆ ಮತ್ತು ಹೆಂಗಸರು ಧರಿಸುವ ನೈಟಿಯಲ್ಲಿ ಕಟ್ಟಲಾಗಿದೆ. ಅದು ಕೂಡ ರಕ್ತಮಯವಾಗಿದೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿದ್ದರು. ಡಿವೈಎಸ್ಪಿ ಅಶೋಕ್ ಕುಮಾರ್, ಮಾಲೂರು ಸರ್ಕಲ್ ಇನ್ಸ್ಪೆಕ್ಟರ್ ಟಿ.ಎಂ. ಶಿವಕುಮಾರ್ ಸ್ಥಳಕ್ಕೆ ಆಗಮಿಸಿದ್ದು, ಮಾಸ್ತಿ ಪಿಎಸ್ಐ ಎಚ್.ಆರ್. ಸಿದ್ದಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.