ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಯೋತ್ಪಾದನೆ ತಡೆಗೆ ಕೇಂದ್ರ ಸಂಪೂರ್ಣ ವಿಫಲ

Vishwanath S
Updated On : 28 Oct 2013, 12:13 pm

ಕೆಜಿಎಫ್: ಕೇಂದ್ರದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇದೀಗ ದೇಶದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದ್ದು ಭಯೋತ್ಪಾದನೆ ನಿರ್ಮೂಲನೆಗೆ ಕೇಂದ್ರ ಯುಪಿಎ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಆರೋಪಿಸಿದರು.
ಇಲ್ಲಿನ ನಗರಸಭೆ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಗಡಿಭಾಗದಲ್ಲಿ ಪಾಕಿಸ್ತಾನ ಸೇರಿದಂತೆ ಇತರೆ ದೇಶದ ಭಯೋತ್ಪಾದಕರು ನಿರಂತರವಾಗಿ ದಾಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮವನ್ನು ಜರುಗಿಸದೆ ಕೈಕಟ್ಟಿ ಕುಳಿತಿದೆ ಎಂದರು.
ಡೀಸೆಲ್, ಪೆಟ್ರೋಲ್, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ  ಏರಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗದ ಜನತೆಯು ಪರದಾಡುವಂತಾಗಿದೆ. ಆದರೆ  ಕೇಂದ್ರ ಯುಪಿಎ ಸರ್ಕಾರ  ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಂತೋಷ್‌ಲಾಡ್ ದುಡ್ಡು:  ಅದೇ ರೀತಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣಿ ಭ್ರಷ್ಟಾಚಾರದಲ್ಲಿ ತೊಡಗಿರುವವ ವಿರುದ್ಧ ಕಾನೂನು ರೀತ್ಯ ಕ್ರಮವನ್ನು ಜರುಗಿಸಲು ಎಲ್ಲಾ ರೀತಿಯ ಹೋರಾಟಗಳನ್ನು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಆದರೆ ಇದೀಗ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಸಚಿವ ಸಂತೋಷ್‌ಲಾಡ್ ಗಣಿ ಹಗರಣದಲ್ಲಿ ಸಿಲುಕಿಕೊಂಡು ಆರೋಪ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೊತೆಯಲ್ಲೆ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಂತೋಷ್‌ಲಾಡ್ ಅವರು ನೀಡಿದ ಹಣದಿಂದಲೇ ಅದೇ ರೀತಿ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಲಾಡ್ ಅವರ ನೀಡುವ ಹಣದಿಂದಲೇ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಲೇವಡಿ ಮಾಡಿದರು.
ಕೆಜಿಎಫ್ ಕ್ಷೇತ್ರದ ಶಾಸಕಿ ವೈ. ರಾಮಕ್ಕ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ತಮಗೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ, ತಾಮೊಬ್ಬ ಮಹಿಳಾ ಶಾಸಕಿ ಎಂಬುದನ್ನು ಲೆಕ್ಕಿಸದೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್‌ಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಅದೇ ರೀತಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು  ಕೋಲಾರ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ ಕೇಂದ್ರ ಸಚಿವರಾಗಿ ಕೇವಲ ಅಂಗವಿಕಲ, ವೃದ್ಧಾಪ್ಯ ವೇತನ ಅರ್ಜಿಗಳನ್ನು ವಿತರಿಸಲು ಸಚಿವರು ಕೆಜಿಎಫ್‌ಗೆ ಆಗಮಿಸುತ್ತಿದ್ದು, ಕ್ಷೇತ್ರದಲ್ಲಿರುವ ಹಲವಾರು ಸಮಸ್ಯೆಗಳು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಕುಳಿತ್ತಿದ್ದಾರೆ ಎಂದು ಆರೋಪಿಸಿದರು.
ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ಶಾಸಕ ಎಂ. ಕೃಷ್ಣಪ್ಪ, ಮಾಜಿ ಶಾಸಕರಾದ ಮದನ್‌ಲಾಲ್ ಸುರಾನಾ, ಎಂ. ನಾರಾಯಣಸ್ವಾಮಿ, ನಂದೀಶ್‌ರೆಡ್ಡಿ, ವೈ. ಸಂಪಂಗಿ, ಎಂ.ಎಸ್. ಆನಂದ್, ರಾಜ್ಯ ಎಸ್ಸಿಎಸ್ಟಿ ಪ್ರಧಾನ ಕಾರ್ಯದರ್ಶಿ ವೆಂಕಟೇಶಮೌರ್ಯ, ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಕೆಜಿಎಫ್ ಘಟಕ ಅಧ್ಯಕ್ಷ ಸುರೇಶ್‌ನಾರಾಯಣ, ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಬೆಂಬಲಿಗರು ಒಟ್ಟು 2 ಸಾವಿರಕ್ಕೂ ಹೆಚ್ಚು ಮಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement