ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಂಗಭೂಮಿ ಕಲಾವಿದರ ಬದುಕು ಶೋಚನೀಯವಾಗಿದೆ

Vishwanath S
Updated On : 28 Oct 2013, 12:13 pm

ಚಿಕ್ಕಬಳ್ಳಾಪುರ: ರಂಗಭೂಮಿ ಕಲಾವಿದರ ಬದುಕು ಶೋಚನೀಯವಾದುದು. ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಸಲುವಾಗಿ ರಂಗಭೂಮಿ ಕಲಾವಿದರಿಗೆ ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಅಗತ್ಯವಿರುವ ನೆರವು, ಪ್ರೋತ್ಸಾಹ ನೀಡಬೇಕಾಗಿದೆ ಎಂದು ಆದಿ ಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥಸ್ವಾಮೀಜಿ ಹೇಳಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಕನಕಶ್ರೀ ಕಲಾನಿಕೇತನ ಟ್ರಸ್ಟ್ ವತಿಯಿಂದ ಪದ್ಮಶ್ರೀ ಡಾ. ಗುಬ್ಬಿವೀರಣ್ಣನವರ ಕಂಪನಿಯ ಹಿರಿಯ ಕಲಾವಿದ ಕೆಂಪೇಗೌಡ ರಂಗರತ್ನ, ಕಲಾ ಕೇಸರಿ ಪ್ರಶಸ್ತಿಪುರಸ್ಕೃತರಾದ ಎಂ.ಪಿಎಸ್. ಕುಮಾರ್ ಸಹಾಯಾರ್ಥ ಏರ್ಪಡಿಸಿದ್ದ  ಮಡದಿಯಾಗಿ ಬಂದಳು, ಮಾತೆಯಾಗಿ ನಿಂದಳು ಎಂಬ ಹಾಸ್ಯ ಭರಿತ ಸಾಮಾಜಿಕ ನಗೆ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲ ಕಿರು ತೆರೆಯ ಅಶ್ಲೀಲ ದೃಶ್ಯಗಳಿಗೆ ಮಾರು ಹೋಗುವ ಜನತೆ ನಾಟಕಗಳಂತಹ ರಂಗ ಕಲಾವಿದರನ್ನು ಪ್ರೋತ್ಸಾಹಿಸಲು ಹಿಂದೆ ಸರಿಯುತ್ತಾರೆ. ಇದು ದೌರ್ಭಾಗ್ಯ ಎಂದು ವಿಷಾದ ವ್ಯಕ್ತಪಡಿಸಿದರು.
ನಾಟಕ ಕಲೆಯು ಸಾಂಸಾರಿಕ ಬದ್ಧತೆಯ ಒಂದು ಚಿತ್ರಣವೂ ಹೌದು, ಇಂತಹ ನಾಟಕಗಳು ಈ ಸಮಾಜಕ್ಕೆ ಪ್ರಸ್ತುತವಾಗಿವೆ ನಾಟಕ ಕಲೆಗಳನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ವರ್ಗದವರು ಶ್ರಮಿಸಬೇಕಾಗಿದೆ. ನಾಟಕ ಕಲೆಯನ್ನು ಸವಿಯುವ ಸದಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದರು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ಬಣ್ಣ ಹಚ್ಚಿ ನಾಟಕ ಮಾಡಿ ಹಾಡುವ ಕಲಾವಿದರು ಕೆಲವೇ ದಿನಗಳಲ್ಲಿ ದೂರ ಸರಿಯುವ ಪ್ರಸಂಗ ಬಂದೊದಗಿದೆ. ನೈಜ ಚಿತ್ರಣದ ಸಾರಾಂಶವಿರುವ ಈ ನಾಟಕಗಳಲ್ಲಿ ರಸವತ್ತಾದ ಕಥಾನಕಗಳು ಇರುತ್ತವೆ. ಇವು ಮಾಯವಾಗುವ ಹಂತ ತಲುಪತ್ತಿರುವುದು ಖೇದಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಂದು ಗುಬ್ಬಿವೀರಣ್ಣನವರ ಕಂಪನಿಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗ ಕಲಾವಿದನಾಗಿ  ದುಡಿದ ಎಂ.ಪಿ.ಎಸ್. ಕುಮಾರ್ ತಮ್ಮ ಇಳಿ ವಯಸ್ಸಿನಲ್ಲಿ ನಾಟಕ ಕಲೆಯನ್ನು ಶ್ರೀಮಂತಿಕೆಗೊಳಿಸುವ ಉದಾರತೆ ಮೆರೆಯುತ್ತಿರುವುದು ಸಾರ್ಥಕ ಸಾಧನೆ ಎಂದರು.
ಮಾಜಿ ಶಾಸಕ ಎಂ. ಶಿವಾನಂದ್ ಮಾತನಾಡಿ, ರಂಗಕಲಾವಿದರಿಗೆ ಸರ್ಕಾರದಿಂದ ಕೇವಲ 1 ಸಾವಿರ ಮಾಸಾಶನ ದೊರೆಯುತ್ತಿದ್ದು ಇಂದಿನ ದಿನಕ್ಕೆ ಹೋಲಿಸಿದರೆ ಇದು ಏನಕ್ಕೂ ಸಾಲದಾಗಿದೆ. ಒಂದು ಸಾವಿರದಿಂದ 5 ಸಾವಿರ ರೂಗಳಿಗೆ ಏರಿಸುವ ಮೂಲಕ ರಂಗಭೂಮಿ ಕಲಾವಿದರಿಗೆ ಸರ್ಕಾರ ನೆರವಾಗಬೇಕೆಂದರು.
ಗಣ್ಯರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಲಲಿತಕ್ಕ, ನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ರಾಮಚಂದ್ರಪ್ಪ, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಭಜನೆ, ಜಾನಪದ ಹರಿಕಥೆಗಳಲ್ಲಿ ತೊಡಗಿಸಿಕೊಂಡಿರುವ ಡಿ. ಮುನಿಯಪ್ಪ ಮತ್ತು ಕ್ಷೌರಿಕ ಸೇವೆ ಸಲ್ಲಿಸುತ್ತಿರುವ ಡಿ.ನಾರಾಯಣಪ್ಪರವರನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರದ ಶಾಖಾ ಮಠದ ಮಂಗಳಾನಂದನಾಥಸ್ವಾಮಿಜಿ ಹಾಗೂ ಎಂ.ಪಿ.ಎಸ್. ಕುಮಾರ್ ಸೇರಿದಂತೆ ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಕೆ.ವಿ. ನಾಗರಾಜ್, ತಾಪಂ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಸದಸ್ಯ ಪಟ್ರೇನಹಳ್ಳಿ ಪಿ.ಎ. ಮೋಹನ್, ಡೈರಿ ನಾರಾಯಣಸ್ವಾಮಿ, ಬಿ.ಎಸ್. ರಫಿವುಲ್ಲಾ, ಪಿ. ನಾರಾಯಣಸ್ವಾಮಿ, ಜಿ.ಎಸ್. ಚಂದ್ರಶೇಖರ್, ಯಲುವಹಳ್ಳಿ ಚನ್ನಕೃಷ್ಣಪ್ಪ, ಎಸ್.ಎನ್. ರಮೇಶ್ ಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement