ಅಪಘಾತ; ವೈದ್ಯರಿಗೆ ಗಾಯ
ಶ್ರೀನಿವಾಸಪುರ: ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವಾಹನ ಆಯ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು 4 ಮಂದಿ ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ- ಕೋಲಾರ ಮಾರ್ಗದ ಮಧ್ಯೆ ಹೂಹಳ್ಳಿ ಗೇಟ್ ಬಳಿ ಜರುಗಿದೆ.
ಪಟ್ಟಣದ ಸುಭಾಷ್ ರಸ್ತೆಯಲ್ಲಿ ಮಾನಸಿಕ ಕಾಯಿಲೆಗೆ ತುತ್ತಾಗಿದ್ದ ಹೆಣ್ಣು ಮಗುವನ್ನು ಪರೀಕ್ಷಿಸಿದ ನಂತರ ಸೋಮವಾರ ರಾತ್ರಿ 7.30 ರ ಸಮಯದಲ್ಲಿ ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಡಾ.ಎಂ.ವಿ. ಶ್ರೀನಿವಾಸ. ಡಾ. ಲತಾಪರಿಮಳಾ, ಡಾ.ಎನ್.ಎಲ್. ಮುರಳೀಬಾಬು ಕೋಲಾರಕ್ಕೆ ಪ್ರಯಾಣಿಸುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಬೈಕನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು ವಾಹನ ಪೂರ್ತಿ ಜಖಂಗೊಂಡಿದ್ದು ವಾಹನದಲ್ಲಿದ್ದ ವೈದ್ಯರು ತೀವ್ರ ಗಾಯಗೊಂಡು ಕೋಲಾರದ ಎಸ್ಎನ್ಆರ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.