'ಕೆರೆ ಒತ್ತುವರಿ ತೆರವಿಗೆ ಜನತೆ ಸಹಕಾರ ಮುಖ್ಯ'
ಕ.ಪ್ರ.ವಾರ್ತೆ ಕೋಲಾರ ಅ. 28
ಅವಿಭಾಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಅನೇಕರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಲು ಜನತೆ ಸಂಘಟಿತರಾಗಬೇಕು ಹಾಗೂ ಸಂಘಗಳ ರಚನೆ ಮೂಲಕ ಕೆರೆಗಳನ್ನು ಮತ್ತೆ ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಕನ್ನಡಪ್ರಭ ಪ್ರಧಾನ ವರದಿಗಾರ ಕೆರೆ ಮಂಜುನಾಥ್ ಸಲಹೆ ನೀಡಿದರು.
ನಗರದ ಟಿ. ಚನ್ನಯ್ಯರಂಗಮಂದಿರದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಜಲಸಂರಕ್ಷಣೆ ಸವಾಲುಗಳು ಕೆರೆ ಒತ್ತುವರಿ ತೆರವು-ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರವೇ ಕೆರೆ ಒತ್ತುವರಿಗೆ ಮಾದರಿಯಾಗಿದೆ, ಸ್ಥಳೀಯರ ಬೇಡಿಕೆ ಮತ್ತು ಭಾವನೆಗಳ ಆದ್ಯತೆ ಮೇರೆಗೆ ಸರ್ಕಾರಗಳು ನೀರಾವರಿ ಯೋಜನೆಗಳನ್ನು ರೂಪಿಸದಿರುವುದರಿಂದ ಸಮಸ್ಯೆಗಳು ಉದ್ಭವವಾಗಿವೆ, ಜನರು ಕೆರೆ ಒತ್ತುವರಿ ತೆರವು ಮಾಡಲು ಸಂಘಗಳನ್ನು ರೂಪಿಸಿಕೊಂಡು ಕಾರ್ಯಾಚರಣೆ ನಡೆಸದಿದ್ದರೆ ಅಂತರ್ಜಲ ಸಮಸ್ಯೆ ಹಾಗೆಯೇ ಉಳಿಯುತ್ತದೆ ಎಂದರು.
ಕೆರೆ ಒತ್ತುವರಿಯನ್ನು ತೆರವುಗೊಳಿಸಲು ವಿಚಾರದಲ್ಲಿ ಪತ್ರಕರ್ತರು ಸಾಮಾಜಿಕ ಕಾಳಜಿಯಿಂದ ಕರ್ತವ್ಯ ನಿರ್ವಹಿಸುವ ಸವಾಲು ಎದುರಿಸಬೇಕೆಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಹೇಳಿದರು. ಕೆರೆಗಳ ಒತ್ತುವರಿ ಮಿತಿ ಇಲ್ಲದೆ ನಡೆದಿದೆ, ಇವುಗಳ ಒತ್ತುವರಿಯನ್ನು ತೆರವುಗೊಳಿಸಲು ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆ ಇದ್ದರೆ, ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪ ಹೇಳುತ್ತಿದ್ದಾರೆ, ಜನರು ಇದನ್ನು ವಿರೋಧಿಸುವ ಚೈತನ್ಯ ಕಳೆದುಕೊಂಡಿದ್ದಾರೆ, ಇಂತ ಸಂದರ್ಭದಲ್ಲಿ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೆರೆಗಳನ್ನು ಉಳಿಸುವ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆಯೆಂದರು.
ಕೆ. ನರಸಿಂಹ ಮೂರ್ತಿ ಮಾತನಾಡಿ, ಜನರು ಜಲಚಕ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದರಿಂದ ಜಲಕ್ಷಾಮದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ, ನೀರಿನ ಆಡಿಟ್ ನಡೆಯದಿರುವುದೇ ಇದಕ್ಕೆ ಕಾರಣವಾಗಿದೆಯೆಂದರು.
ಪತ್ರಕರ್ತ ವಿಶ್ವಕುಂದಾಪುರ ಮಾತನಾಡಿ, ನೀರಿನ ಸಂರಕ್ಷಣೆ ಮತ್ತು ಶಾಶ್ವತ ನೀರಾವರಿ ಬೇಡಿಕೆ, ಕೆರೆಗಳ ಒತ್ತುವರಿ ವಿಚಾರದಲ್ಲಿ ಜಿಲ್ಲೆಯ ಜನತೆ ಸಮಾನ ಮನಸ್ಕರಾಗಿದ್ದಾರೆ, ಆದರೆ ಈ ಕಾರ್ಯವನ್ನು ಆರಂಭಿಸುವ ವಿಚಾರದಲ್ಲಿ ಗೊಂದಲಗಳಿವೆ, ಕೆರೆಗಳನ್ನು ಒತ್ತುವರಿ ಆದಮೇಲೆ ತೆರವುಗೊಳಿಸುವುದಕ್ಕಿಂತಲೂ ಒತ್ತುವರಿ ಆಗದಂತೆಯೇ ತಡೆಯಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕೆ.ಎಸ್. ಗಣೇಶ್ ಮಾತನಾಡಿ ಕೆರೆ ಕುಂಟೆ ಕಲ್ಯಾಣಿಗಳನ್ನು ನಿರ್ಮಿಸಿದ ಪೂರ್ವಿಕರ ಚಿಂತನೆಗಳಂತೆಯೇ ಈಗಲೂ ನೀರಿನ ಸಂರಕ್ಷಣೆ ವಿಚಾರಲ್ಲಿ ಜನರು ಒಂದೇ ಯೋಜನೆಗೆ ಜೋತು ಬೀಳದೆ ಬಹುಮುಖಿ ಯೋಜನೆಗಳ ಮೂಲಕ ಕೋಲಾರ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗೆ ಮುಂದಾಗಬೇಕು, ಇದನ್ನು ಪ್ರತಿ ಮನೆಯಿಂದ ಪ್ರತಿಯೊಬ್ಬರೂ ಆರಂಭಿಸಬೇಕೆಂದು ಹೇಳಿದರು.