ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆರೆ ಒತ್ತುವರಿ ತೆರವು, ಅಂತರ್ಜಲ ಅಭಿವೃದ್ಧಿಗೆ ನಿರ್ಣಯ

Rashmi Kasaragodu
Updated On : 29 Oct 2013, 12:24 pm

ಕೋಲಾರ: ಶಾಶ್ವತ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನ, ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳ ನಿರ್ಣಯವನ್ನು ಕೋಲಾರದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ಅಂತರ್ಜಲ ಸಂರಕ್ಷಣೆ ಕುರಿತ ವಿಚಾರಗೋಷ್ಠಿಯಲ್ಲಿ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್. ವರ್ತೂರು ಪ್ರಕಾಶ್, ಎಸ್.ಎನ್. ನಾರಾಯಣಸ್ವಾಮಿ, ವೈ. ರಾಮಕ್ಕ, ವಿಧಾನಪರಿಷತ್ ಸದಸ್ಯ ತೂಪಲ್ಲಿ ನಾರಾಯಣಸ್ಪಾಮಿ ಹಾಗೂ ಭಾರತೀಯ ರೈತ ಒಕ್ಕೂಟದ ಕಾರ್ಯದರ್ಶಿ ಪ್ರೊ. ನರಸಿಂಹಪ್ಪ ಇತರರ ಭಾಷಣ ಹಾಗೂ ಎರಡು ವಿಚಾರಗೋಷ್ಠಿಗಳಲ್ಲಿ ಹೊರ ಹೊಮ್ಮಿದ ಉಪನ್ಯಾಸ ಆಧರಿಸಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್ ಓದಿದ ಈ ನಿರ್ಣಯವನ್ನು ಸಭೆಯಲ್ಲಿದ್ದ ಪತ್ರಕರ್ತರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕರತಾಡನ ಮಾಡುವ ಮೂಲಕ ಅಂಗೀಕರಿಸಿದರು. ಈ ನಿರ್ಣಯವನ್ನು ವರದಿಯ ರೂಪದಲ್ಲಿ ತಯಾರಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಪತ್ರಕರ್ತರ, ವಿವಿಧ ರೈತಪರ, ಶಾಶ್ವತ ನೀರಾವರಿ ಹೋರಾಟಗಾರ ಸದಸ್ಯರ ನಿಯೋಗದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿರ್ಣಯದ ವರದಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಮುಂದಿನ ಬಜೆಟ್‌ನಲ್ಲಿ ಅನುದಾನ ನಿಗದಿ ಪಡಿಸಲು ಸರ್ಕಾರವನ್ನು ಆಗ್ರಹಿಸಲು ವಿಚಾರ ಸಂಕಿರಣದಲ್ಲಿ ತೀರ್ಮಾನಿಸಲಾಯಿತು.
ಮೊದಲ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್ ವಹಿಸಿದ್ದು, ಪತ್ರಕರ್ತರಾದ ಕೆ.ವಿ.ಪ್ರಭಾಕರ್, ಮಂಜುನಾಥ ಅದ್ದೆ ವಿಷಯಗಳನ್ನು ಮಂಡಿಸಿದರು. ಎರಡನೇ ವಿಚಾರ ಸಂಕಿರಣದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರಾದ ಕೆರೆ ಮಂಜುನಾಥ್, ನರಸಿಂಹಮೂರ್ತಿ, ವಿಶ್ವಕುಂದಾಪುರ ವಿಷಯಗಳನ್ನು ಮಂಡಿಸಿದರೆ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ವಹಿಸಿದ್ದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾರ್ಯದರ್ಶಿ ಎಸ್. ಶಂಕರಪ್ಪ, ವಾರ್ತಾಧಿಕಾರಿ ಸಿ.ಎಂ. ರಂಗಾರೆಡ್ಡಿ, ಮಹಮದ್ ಯೂನುಸ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement