ನಿಧಿ ಶೋಧನೆ: ದೂರು ದಾಖಲು
ಟೇಕಲ್: ಪಟ್ಟಣದ ಪ್ರಕಾಶ್ ಶೆಟ್ಟಿ ಎಂಬವರಿಗೆ ಸೇರಿದ ನೀಲಗಿರಿ ತೋಪಿನಲ್ಲಿದ್ದ ದುಗ್ಗಲಮ್ಮ ದೇವಿ ವಿಗ್ರಹವನ್ನು ದುಷ್ಕರ್ಮಿಗಳು ಕೆಡವಿ ಸುಮಾರು 5 ಅಡಿ ಆಳ ಅಗೆದು ನಿಧಿಗಾಗಿ ಶೋಧಿಸಲಾಗಿದೆ.
ದುಗ್ಗಲಮ್ಮದೇವಿ ವಿಗ್ರಹ ಪುರಾತನದಾಗಿದ್ದು ನಿಧಿಯ ಆಸೆಗಾಗಿ ಅದನ್ನು ಕೆಡವಿ ಪವಿತ್ರವಾದ ದೇವಿಯ ಪಾದುಕೆಗಳನ್ನು ಪಕ್ಕಕ್ಕೆ ಎಸೆದು, ಸುತ್ತಲೂ ನಿಂಬೆ ಹಣ್ಣಿನಿಂದ ಪೂಜೆ ಮಾಡಿ, ಅಷ್ಟದಿಗ್ಬಂಧನ ಮಾಡಲಾಗಿದೆ. ಈ ಸಂಬಂಧ ತೋಪಿನ ಮಾಲಿಕ ಪ್ರಕಾಶ್ ಶೆಟ್ಟಿ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ದೂರು ಸಲ್ಲಿಸಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ನಾರಾಯಣಚಾರಿ ಟೇಕಲ್ ಎಎಸ್ಐ ರಷೀದ್ ಖಾನ್ ಭೇಟಿ ನೀಡಿದ್ದರು.
ವಿಶೇಷ ಉಪನ್ಯಾಸ
ಚಿಂತಾಮಣಿ: ಶರೀರ ಒಂದು ಯಂತ್ರವಿದ್ದಂತೆ. ಈ ಯಂತ್ರ ಗಟ್ಟಿಯಾಗಿದ್ದರೆ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದು ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು. ಕೈವಾರ ಗವಿ ವೈಕುಂಠ ಸಂಕಿರಣದಲ್ಲಿ ಬೆಂಗಳೂರಿನ ಓಂ ಪ್ರತಿನಿಷ್ಠಾನದಿಂದ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಆರೋಗ್ಯದ ಸೂತ್ರಗಳು ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ, ಆಧುನಿಕ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ವ್ಯಾಯಾಮ, ಯೋಗ, ಧ್ಯಾನಗಳಿಂದ ಆರೋಗ್ಯದ ಸವಾಲು ಎದುರಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಓಂ ಯೋಗ ಪ್ರತಿಷ್ಠಾನದ ಪ್ರಹ್ಲಾದ್ ಜೀ, ಸಂಸ್ಥೆಯ ಕಾರ್ಯದರ್ಶಿ ಗುರುಮೂರ್ತಿ, ಶಿಬಿರದ ವ್ಯವಸ್ಥಾಪಕ ಶಾಂತರಾಜು ಹಾಗೂ ಹಲವಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಳಿಸಲು ಮನವಿ
ಚಿಂತಾಮಣಿ: ಕನ್ನಡ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಉಪ ತಹಸೀಲ್ದಾರ್ಗೆ ಮನವಿ ನೀಡಿದರು. ತಾಲೂಕಿನಲ್ಲಿ ಕನ್ನಡ ವಿರೋಧಿ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಇವುಗಳ ನಿರ್ಮೂಲನೆಗೆ ಕನ್ನಡಪರ ಸಂಘಟನೆಗಳಿಂದ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ.1 ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪರ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಪಟ್ಟಣದ ಎಲ್ಲಾ ಚಿತ್ರಮಂದಿರಗಳಲ್ಲಿ ನವೆಂಬರ್ ಪೂರ್ತಿ ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸಬೇಕು, ತಾಲೂಕಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಪ್ರಥಮ ಆದ್ಯತೆ ಮೇಲೆ ಬೋಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ನೀಡಲಾಯಿತು.