ನಿರ್ವಹಣೆ ಕೊರತೆಯಿಂದ ಪಾಳುಬಿದ್ದ ವಸತಿಗೃಹಗಳು
ಬಂಗಾರಪೇಟೆ: ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೇಲ್ವೆ ಇಲಾಖೆ ನೌಕರರಿಗೆ ನಿರ್ಮಾಣ ಮಾಡಿರುವ ವಸತಿ ಗೃಹಗಳು ಪಾಳು ಬೀಳುವ ಹಂತದಲ್ಲಿದ್ದರೂ ದುರಸ್ತಿಗೊಳಿಸದ ಕಾರಣ ನೌಕರರು ವಸತಿ ಗೃಹಗಳು ಖಾಲಿ ಮಾಡುವಂತಾಗಿದೆ.
ಪಟ್ಟಣದಲ್ಲಿ ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಿರುವ, ಯಾವುದೇ ಮೂಲ ಸೌಲಭ್ಯಗಳಿಲ್ಲದ ವಸತಿ ಗೃಹಗಳಿಲ್ಲದ ವಸತಿ ಗೃಹಗಳಿಗೆ ರಾಜ್ಯ ಸರ್ಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೆ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟರೂ ಅವರ ನಿರ್ಲಕ್ಷ್ಯದ ಕಾರಣ ಅಭಿವೃದ್ಧಿ ಮರೀಚಿಕೆಯಾಗಿದೆ.
ಕಳೆದ ಐದಾರು ದಶಕಗಳ ಹಿಂದೆ ನಿರ್ಮಾಣವಾಗಿರುವ ಹೆಂಚಿನ ಮನೆಗಳು ಕಿರಿದಾಗಿದ್ದು, ಶಿಥಿಲಾವಸ್ಥೆಗೆ ತಲುಪಿ ನೌಕರರು ಇಲ್ಲಿ ವಾಸ ಮಾಡಲು ಹಿಂದೇಟು ಹಾಕುತ್ತಿರುವುದರಿಂದ 50ಕ್ಕೂ ಹೆಚ್ಚಿನ ಮನೆಗಳು ಖಾಲಿಯಾಗಿವೆ. ಖಾಲಿ ಮನೆಗಳ ಬಾಗಿಲು ಕಿಟಕಿಗಳು ಕಳ್ಳರ ಪಾಲಾಗಿದೆ. ಜೊತೆಗೆ ಇಲ್ಲಿ ರಾತ್ರಿ ವೇಳೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇನ್ನು ಕೆಲವರು ವಿಧಿಯಿಲ್ಲದೆ ಅವ್ಯವಸ್ಥೆಯಲ್ಲೆ ಕಾಲ ಕಳೆಯುವಂತಾಗಿದೆ.
ಇನ್ನಾದರು ಇಲಾಖೆಯ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ವಸತಿಗೃಹಗಳನ್ನು ದುರಸ್ತಿಗೊಳಿಸಿ ನಾಗರಿಕ ಸೌಲಭ್ಯ ಒದಗಿಸಬೇಕೆಂದು ನೌಕರರು ಒತ್ತಾಯಿಸಿದ್ದಾರೆ.