ನೀರಿನ ಸಮಸ್ಯೆ ನೀಗಲು ಕ್ರಮ: ಮಂಜುನಾಥ್
ಕ.ಪ್ರ. ವಾರ್ತೆ, ಮಾಲೂರು. ಆ.28
ಪಟ್ಟಣದ ನೀರಿನ ಸಮಸ್ಯೆ ನೀಗಿಸಲು ಇಲ್ಲಿನ ದೊಡ್ಡಕೆರೆಯಲ್ಲಿ 40 ಲಕ್ಷ ರು. ವೆಚ್ಚದಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಾಣದ ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ ರು. 5 ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಸಿಸಿ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕುಡಿಯುವ ನೀರಿನ ನಿವಾರಣೆಗಾಗಿ ಕೊರೆಸಲಾಗಿರುವ ಒಟ್ಟು 220 ಕೊಳವೆಬಾವಿಗಳಲ್ಲಿ ಹಲವು ವಿಫಲಗಳ ನಡುವೆ ಶೇ.80 ರಷ್‌ಠು ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗಿದೆ. ಪ್ರಸ್ತುತ ಪಟ್ಟಣಕ್ಕೆ ಹೆಚ್ಚುವರಿಯಾಗಿ ಮತ್ತೇ 20 ಕೊಳವೆಬಾವಿ ಕೊರೆಸಲು ಮಂಜೂರಾತಿ ಸಿಕ್ಕಿದ್ದು, ಅವಶ್ಯವಿರುವ ಎಲ್ಲ ವಾರ್ಡ್‌ಗಳಲ್ಲಿ ಕೊರೆಯಲು ಆದೇಶಿಸಲಾಗಿದೆ ಎಂದರು.
ಒಳಚರಂಡಿ ಕಾಮಗಾರಿಯಿಂದ ಹದಗೆಟ್ಟಿರುವ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 11 ಕೋಟಿ ರು.ಗಳು ಮಂಜೂರಾಗಿದ್ದು, ಮೊದಲ ಹಂತವಾಗಿ ಪಟ್ಟಣದ 8,9 ಹಾಗೂ 17 ನೇ ವಾರ್ಡ್‌ನಲ್ಲಿ 5 ಕೋಟಿ ರು. ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಇಲ್ಲಿನ ರಸ್ತೆ ಕಾಮಗಾರಿಗೆ ಫಿಲ್ಟರ್ ಮರುಳು ಬಳಸದಂತೆ ಸ್ಥಳದಲ್ಲಿದ್ದ ಗುತ್ತಿಗೆದಾರ ಪ್ರಕಾಶ್ ಅವರಿಗೆ ಎಚ್ಚರಿಕೆ ನೀಡಿದ ಶಾಸಕರು ಕಾಮಗಾರಿಯ ಗುಣಮಟ್ಟವನ್ನು ಕಾಯುವ ಜವಾಬ್ದಾರಿಯನ್ನು ಸಾರ್ವಜನಿಕರು ಹೊರಬೇಕು ಎಂದರು.
ಇದೇ ಸಂಧರ್ಭದಲ್ಲಿ ವಾರ್ಡ್ ಸದಸ್ಯ ರಾಮಮೂರ್ತಿ ಮಾತನಾಡಿ ಸ್ಥಳೀಯ ಸಮಸ್ಯೆಗಳನ್ನು ಶಾಸಕರಿಗೆ ವಿವರಿಸಿದರು. ಮುಖ್ಯಾಧಿಕಾರಿ ರೇಣುಕಾ, ಪುರಸಭೆ ಸದಸ್ಯರಾದ ವಿಜಯಲಕ್ಷ್ಮಿ, ಸಿ. ಲಕ್ಷ್ಮಿನಾರಾಯಣ್,ಪಿ. ವೆಂಕಟೇಶ್, ವೇಮನ, ಸಿ.ಪಿ. ನಾಗರಾಜ್, ಜಾಕೀರ್‌ಖಾನ್, ಅಲೂಮಂಜು, ಮುರಳೀಧರ್, ಭಾರತಮ್ಮ ನಂಜುಂಡಪ್ಪ, ಗೀತಾ ವೆಂಕಟೇಶ್, ಲಿಂಗೇಶ್ವರಯ್ಯ, ಗುಲಾಬ್‌ಜಾನ್, ಮೀನಾ ಆಂಜಿನಪ್ಪ, ಟಿ. ರಾಮಚಂದ್ರ ಇದ್ದರು.