ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಭರವಸೆಯಿಂದ ಜಲ ಸಮಸ್ಯೆ ಬಗೆಹರಿಯಲ್ಲ'

Rashmi Kasaragodu
Updated On : 29 Oct 2013, 12:23 pm

ಕ.ಪ್ರ.ವಾರ್ತೆ    ಕೋಲಾರ    ಅ. 28
ಕೇವಲ ಭರವಸೆಗಳಿಂದ ನೀರಿನ ಸಮಸ್ಯೆ ಬಗೆಹರಿಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ನೀರಾವರಿ ಯೋಜನೆ ಜಾರಿ ಸಂಬಂಧ ಕೂಡಲೇ ಜನಪ್ರತಿನಿಧಿಗಳ ಸಭೆ ಕರೆದು ಯಾವ ಯೋಜನೆಯಿಂದ ಜನತೆಗೆ ಅನುಕೂಲವಾಗುತ್ತದೆ ಎಂಬುದನ್ನು ಚರ್ಚಿಸಿ ಕಾಲ ಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಆಗ್ರಹಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಸಂರಕ್ಷಣೆ-ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಪಾತ್ರ ಕುರಿತ ವಿಚಾರ ಸಂಕಿರಣ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನ ಬಳಕೆಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ತಿಂಗಳು ವೇಗಮಲ್ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ತಾವು ಶಾಶ್ವತ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪಿಸಿ ಎತ್ತಿನಹೊಳೆ ಇಲ್ಲವೇ ಡಾ.ಪರಮಶಿವಯ್ಯ ವರದಿ ಆಧಾರಿತ ಯೋಜನೆ ಜಾರಿ ಸಂಬಂಧ ಇರುವ ಗೊಂದಲ ನಿವಾರಿಸಲು ಹಾಗೂ ಸೂಕ್ತವಾದ ಯೋಜನೆ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಕೋರಿದಾಗ ಬೇಡಿಕೆ ಈಡೇರಿಸಲು ಒಪ್ಪಿದ್ದ ಮುಖ್ಯಮಂತ್ರಿಗಳು ಸಭೆಯನ್ನು ಇನ್ನೂ ಕರೆಯಲಾಗಿಲ್ಲ. ಕೂಡಲೇ ಜನಪ್ರತಿನಿಧಿಗಳ ಸಭೆ ಏರ್ಪಾಟು ಮಾಡಿ ನೀರಿನ ಸಮಸ್ಯೆ ನಿವಾರಣೆ ಮಾಡಬೇಕೆಂದರು.
ಸಿಎಂಗೆ ಎಚ್ಚರಿಕೆ: ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ತಾವು ಕೈಕಟ್ಟಿ ಕೂರುವುದಿಲ್ಲ, ಪ್ರತಿಯೊಬ್ಬರ ಬದುಕಿಗೆ ನೀರು ಅನಿವಾರ್ಯವಾಗಿರುವುದರಿಂದ ಸಮಸ್ಯೆ ನಿವಾರಣೆಗಾಗಿ ಸಂಘ ಸಂಸ್ಥೆಗಳು, ನಾಗರಿಕರು ಕೈಗೊಳ್ಳುವ ಹೋರಾಟಕ್ಕೆ ಬೆಂಬಲ ನೀಡುವುದಲ್ಲದೆ, ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮತ್ತೊಮ್ಮೆ ಚರ್ಚಿಸಿ ಜನಪ್ರತಿನಿಧಿಗಳ ಸಭೆ ಕರೆಯುವುದಕ್ಕೆ ಒತ್ತಾಯಿಸುತ್ತೇನೆಂದು ತಿಳಿಸಿದರು. ಬಯಲು ಸೀಮೆಗೆ ಸೇರಿದ 72 ತಾಲೂಕಿನಲ್ಲಿ ಇರುವ ನೀರಿನ ಬವಣೆಯ ಬಗ್ಗೆ ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಎಲ್ಲಾ ಜನಪ್ರತಿನಿಧಿಗಳು ನೀರಿನ ವಿಚಾರದಲ್ಲಿ ಒಗ್ಗಟ್ಟಿನಿಂದ ಜಾವಾಬ್ದಾರಿ ನಿರ್ವಹಿಸಿ ಜನತೆಯ ಆಶೋತ್ತರಗಳನ್ನು ಈಡೇರಿಸಬೇಕೆಂದು ಸಚಿವ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದರು.
ಇದೇ ಅ.30 ರಂದು ಕೋಲಾರದಲ್ಲಿ ಸಾಲ ಯೋಜನೆ ಕುರಿತು ಕೆನರಾ ಬ್ಯಾಂಕ್ ವತಿಯಿಂದ ಸಭೆ ಕರೆಯಲಾಗಿದ್ದು ಈ ಸಭೆಯಲ್ಲಿ ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ 200 ಗ್ರಾಮಗಳಿಗೆ ಶುದ್ಧ ನೀರಿನ ಘಟಕಗಳ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ ಸಚಿವರು, 450 ಗ್ರಾಮಗಳಿಗೆ ಈ ಯೋಜನೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು. ಶಾಶ್ವತ ನೀರಾವರಿ ಯೋಜನೆಯ ಜಾರಿಗಾಗಿ ಈಗಾಗಲೇ ಅನೇಕ ರೀತಿಯ ಪಕ್ಷಾತೀತ ಹೋರಾಟಗಳು ನಡೆದಿವೆ. ಜನತೆಯ ತಾಳ್ಮೆಯನ್ನು ಮತ್ತಷ್ಟು ಪರೀಕ್ಷೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಮುಖ್ಯಮಂತ್ರಿಗಳು ಅದಷ್ಟು ಬೇಗನೆ ಜನಪ್ರತಿನಿಧಿಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಜನತೆಯ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರು. 1,100 ಕೋಟಿ ಯೋಜನೆ: ಎತ್ತಿನ ಹೊಳೆ ಸರಿಯಿಲ್ಲ, ಪರಮಶಿವಯ್ಯ ವರದಿ ಸರಿಯಿಲ್ಲವೆಂದು ಹೇಳುವುದಕ್ಕೆ ನಾವು ತಜ್ಞರಲ್ಲ. ಸರ್ಕಾರ ಪರಿಣಿತರಿಂದ ವರದಿ ತರಿಸಿಕೊಂಡು ಯಾವ ಯೋಜನೆಯಿಂದ ನೀರು ಕೊಡಲು ಸಾಧ್ಯವೆಂಬುದನ್ನು ನಿರ್ಧರಿಸಲಿ, ಇಸ್ರೇಲ್ ಮಾದರಿಯಲ್ಲಿ ನೀರಿನ ಯೋಜನೆ ಅನುಷ್ಠಾನಕ್ಕೂ ಚಿಂತನೆ ನಡೆಯುತ್ತಿದೆ. ರು. 1,100 ಕೋಟಿ ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಕೆರೆಗಳಲ್ಲಿನ ಹೂಳು ತೆಗೆಸಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿ ತಯಾರಿಯಾಗಿದ್ದು ರಾಜ್ಯ ಸರ್ಕಾರ ಕೂಡಲೇ ಸದರಿ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಯೋಜನೆ ಜಾರಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವರ್ತೂರ್ ಆರ್. ಪ್ರಕಾಶ್ ವಹಿಸಿದ್ದರು. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ವೈ. ರಾಮಕ್ಕ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಧ್ಯಮ ಅಕಾಡೆಮಿ ಸದಸ್ಯರಾದ ವಿಜಯ್ ಗ್ರೋವರ್, ಚನ್ನಬಸವಣ್ಣ, ಮಹಮ್ಮದ್ ನ್ಯೂನಸ್, ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ಇದ್ದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ ಕಾರ್ಯಕ್ರಮದ ಉದ್ದೇಶ ತಿಳಿಸಿದರಲ್ಲದೆ ಸ್ವಾಗತ ಕೋರಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ನಿರೂಪಿಸಿ, ಜಿಲ್ಲಾ ವಾರ್ತಾಧಿಕಾರಿ ಸಿ.ಎಂ. ರಂಗಾರೆಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement