ವರ್ತೂರ್ ಬಾಯಿ ಮುಚ್ಚಿಸುವ ಯತ್ನ
ಕ.ಪ್ರ.ವಾರ್ತೆ ಕೋಲಾರ ಅ. 28
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ತಮ್ಮ ವಿರುದ್ಧ ಶಾಸಕ ವರ್ತೂರ್ ಪ್ರಕಾಶ್ ಮಾಡುತ್ತಿರುವ ವಾಗ್ದಾಳಿಯಿಂದ ರೋಸಿ ಹೋಗಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾದಿ ತಪ್ಪದಂತೆ ಎಚ್ಚರಿಕೆ ನೀಡಿ ಶಾಸಕರ ಬಾಯಿಗೆ ಬ್ರೇಕ್ ಹಾಕಲು ಯತ್ನಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಕೆ.ಎಚ್. ಮುನಿಯಪ್ಪನವರೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಾ ಬಂದಿರುವ ಶಾಸಕ ವರ್ತೂರ್ ಪ್ರಕಾಶ್ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿರುವುದರಿಂದ ಜನತೆಗೆ ಪುಕ್ಕಟೆ ಮನರಂಜನೆ ಸಿಕ್ಕರೆ, ಕೇಂದ್ರ ಸಚಿವರಿಗೆ ತಿರುಗೇಟು ನೀಡಲು ಸೂಕ್ತ ವೇದಿಕೆ ಸಿಗದೆ ಪೇಚಿಗೆ ಸಿಗುವಂತಾಗಿತ್ತು.
ವೇಮಗಲ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಿದ್ದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ವರ್ತೂರ್ ಪ್ರಕಾಶ್, ಸಿಎಂ ಎದುರಲ್ಲೇ ಮುನಿಯಪ್ಪನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಚರ್ಚೆಗೆ ಗ್ರಾಸವಾಗಿದ್ದರು. ಇತ್ತೀಚೆಗೆ ಕೋಲಾರದಲ್ಲಿ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲೂ ಶಾಸಕರು ಕೇಂದ್ರ ಸಚಿವರ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಸಚಿವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಸ್ಪಷ್ಟನೆ ನೀಡಿದ್ದರೆ ವಿನಃ ಕೆ.ಎಚ್. ಮುನಿಯಪ್ಪ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ. ಸೋಮವಾರ ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಮಾಧ್ಯಮ ಅಕಾಡೆಮಿಯಿಂದ ಏರ್ಪಡಿಸಿದ್ದ ಸಮಾರಂಭಕ್ಕೆ ಕೊಂಚ ತಡವಾಗಿ ಬಂದ ಶಾಸಕರು ಮುನಿಯಪ್ಪ ಪಕ್ಕದಲ್ಲೇ ಮೌನವಾಗಿ ಬಂದು ಆಸೀನರಾದರು. ಕೆ.ಎಚ್. ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಇದ್ದಕ್ಕಿದಂತೆ ಏರು ದ್ವನಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ ಎಂದ ಮಾತ್ರಕ್ಕೆ ತಾವು ಜನತೆಯ ಸಮಸ್ಯೆಗೆ ಸ್ಪಂದಿಸದೆ ಇರಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದೇವೆ. ಯಾವುದೇ ಕಾರಣಕ್ಕೂ ನ್ಯಾಯ ಸಿಗುವತನಕ ಹೋರಾಟ ನಿಲ್ಲಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಹೇಳಿದರಲ್ಲದೆ, ಯಾರಾದರೂ ರಾಜಕೀಯ ಬೆರೆಸಿದರೆ ಸುಮ್ಮನೆ ಕೂರಲ್ಲವೆಂದು ಶಾಸಕ ವರ್ತೂರ್ ಪ್ರಕಾಶ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮ ಜನರ ಬದುಕಿಗಾಗಿ ಹಮ್ಮಿಕೊಳ್ಳಲಾಗಿದೆ. ಬೇರೆ ವಿಚಾರ ಪ್ರಸ್ತಾಪಿಸಿ ಕಾರ್ಯಕ್ರಮ ಹಾಳುಗೇಡುವುದು ಬೇಡ, ವಿಷಯ ಹಸ್ತಾಂತರ ಮಾಡಿದ್ರೆ ಸುಮ್ಮನೆ ಇರಲ್ಲವೆಂದು ಏರು ದನಿಯಲ್ಲಿ ತಿಳಿಸಿ ವರ್ತೂರ್ ಬಾಯಿಗೆ ಬ್ರೇಕ್ ಹಾಕಲು ಯತ್ನಿಸಿದರು.
ಯಾವತ್ತೂ ಗಟ್ಟಿ ದನಿಯಲ್ಲಿ ಮಾತನಾಡದ ಸಚಿವ ಮುನಿಯಪ್ಪನವರು ಇದ್ದಕ್ಕಿದಂತೆ ವರ್ತೂರ್ ಅವರಿಗೆ ಹಾದಿ ತಪ್ಪದಂತೆ ಎಚ್ಚರಿಕೆ ನೀಡಿದ್ದನ್ನು ಗಮನಿಸಿದ ಸಭಿಕರು ತಬ್ಬಿಬ್ಬು ಆದರು.