ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿಗೆ ಒತ್ತಾಯಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ

Rashmi Kasaragodu
Updated On : 29 Oct 2013, 12:24 pm

ಚಿಕ್ಕಬಳ್ಳಾಪುರ: ರಾಜ್ಯದ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ನವೆಂಬರ್ ತಿಂಗಳಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶಾಶ್ವತ ನೀರಾವರಿಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಶಾಶ್ವತ ನೀರಾವರಿ ಹೋರಾಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾಡಿನಲ್ಲಿ ಸಮಗ್ರ ಯೋಜನೆಗಳನ್ನು ರೂಪಿಸುವ ಮೂಲಕ ಜನರಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರದ ಕೈಯಲ್ಲಾಗಿಲ್ಲ. ಇದರಿಂದ ಚಳಿಗಾಲ ಅಧಿವೇಶನದ ಮೊದಲ ದಿನವೇ ನಾಡಿನ ಮೂಲೆ ಮೂಲೆಗಳಿಂದ ಎಲ್ಲಾ ಸಮಸ್ಯೆಗಳನ್ನು ಒಳಗೊಂಡಂತೆ 1 ಲಕ್ಷ ಜನ ಸೇರಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದು ಸರ್ಕಾರ ಇದನ್ನು ಎದುರಿಸಲು ಸಿದ್ಧವಾಗಲಿ ಎಂದು ಸವಾಲೆಸೆದರು.
ರಾಜ್ಯದಲ್ಲಿ 10 ವರ್ಷಗಳಲ್ಲಿ 4 ರಿಂದ 5 ಬಾರಿ ಬರಗಾಲ ಬಂದಿದ್ದು ಇದರಲ್ಲಿ ದೇಶದಲ್ಲಿ ರಾಜಸ್ಥಾನ ಹೊರತು ಪಡಿಸಿದರೆ ಕರ್ನಾಟಕವೇ ಎರಡನೇ ಸ್ಥಾನ ಪಡೆದಿದೆ. ಆದರೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬರಗಾಲ ತಡೆಗಟ್ಟಲು ಏನು ಕ್ರಮ ಕೈಗೊಂಡಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಹೇಳಬೇಕು. ಬರಗಾಲ, ನಿರುದ್ಯೋಗ, ವಲಸೆ ಹೋಗುವುದನ್ನು ತಡೆಗಟ್ಟಲು 1 ರೂಪಾಯಿ ಅಕ್ಕಿ ವಿತರಿಸುವ ಯೋಜನೆ ಪರಿಹಾರವೇ ಎಂದು ಪ್ರಶ್ನಿಸಿದರು.
ಪಶ್ಚಿಮಘಟ್ಟದಲ್ಲಿ ಬೀಳುವ ಮಳೆ ನೀರನ್ನು ಬಯಲುಸೀಮೆ ಭಾಗಕ್ಕೆ ಹೇಗೆ ತರಬಹುದು ಎಂಬುದರ ಬಗ್ಗೆ ಪರಮಶಿವಯ್ಯನವರು ಯೋಜನೆ ರೂಪಿಸಿದ್ದಾರೆ. ಆದರೆ ಈವರೆಗೂ ಜಾರಿಯಾಗಿಲ್ಲ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಕಾರಣ.
ಇದೇ ಅಲ್ಲ, ನಾಡಿನಲ್ಲಿ ಹರಿಯುವ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದರು.
ನೀರಿನ ಸದ್ಬಳಕ್ಕೆ ಮಾಡಿಕೊಳ್ಳುವಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಆದರೆ, ರಾಜ್ಯಕ್ಕೆ ಹಾಲು ಕೊಡುತ್ತಿರುವ ಈ ಜಿಲ್ಲೆಯ ಜನರು ವಿಷಮಿಶ್ರಿತ ನೀರನ್ನು ಕುಡಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೊಯ್ಲಿ ವಿರುದ್ಧ ಕಿಡಿ: ಕೇಂದ್ರ ಸಚಿವ ವೀರಪ್ಪಮೊಯ್ಲಿ, ಉತ್ತರ ಕರ್ನಾಟಕದ ಭಾಗದ ಜನರಿಗೆ ಸಿಟ್ಟು ಬರದಂತೆ, ಈ ಭಾಗಕ್ಕೆ ನೀರು ತರದಂತೆ ಮುಂದಿನ ಚುನಾವಣೆಯ ಲಾಭ ಪಡೆಯಬೇಕು ಎಂದುಕೊಂಡಿದ್ದಾರೆ.
 ಬಜೆಟ್‌ನಲ್ಲಿ ನೀರಾವರಿಗಾಗಿ ಮೀಸಲಿಟ್ಟಿರುವ 8 ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿಯಲು ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದ ಅವರು, ಡಾ. ಪರಮಶಿವಯ್ಯನವರ ವರದಿ ಅವೈಜ್ಞಾನಿಕವಾಗಿದ್ದರೆ, ಜಾರಿಗೆ ತರಲು ಸಾಧ್ಯವಾಗದಿದ್ದರೆ ನೇರವಾಗಿ ಸರ್ಕಾರ ಹೇಳಲಿ, ಅದು ಬಿಟ್ಟು ಚುನಾವಣೆಗಾಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಮಾತನಾಡಿ, ತಾವು ಸಿದ್ಧಪಡಿಸಿದ ಶಾಶ್ವತ ನೀರಾವರಿ ಯೋಜನೆ ವರದಿಗೆ ಮುಂದಿನ ಜನವರಿಗೆ 40 ವರ್ಷ ತುಂಬುತ್ತದೆ. ಆದರೂ ಸರ್ಕಾರ ಯೋಜನೆಯನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ.
 ಕಾವೇರಿ, ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಆದರೆ ಸಮುದ್ರ ಸೇರುವ ನೀರನ್ನು ಮಾತ್ರ ಉಪಯೋಗಿಸಿಕೊಳ್ಳಲು ಆಗುತ್ತಿಲ್ಲ. ನೇತ್ರಾವತಿ ನದಿ ನೀರನ್ನು ಗುರುತ್ವಾಕರ್ಷಣೆ ಮುಖಾಂತರ ಈ ಭಾಗಕ್ಕೆ ತರುವ ಯೋಜನೆ ರೂಪಿಸಿದ್ದರೆ ಸಣ್ಣಪುಟ್ಟ ಹಳ್ಳಗಳ ನೀರನ್ನು ತರುತ್ತೇವೆ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಆದರೆ ಈವರೆಗೂ ನೀರು ತರಲು ಸಾಧ್ಯವಾಗಿಲ್ಲ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಕೆಎಂಎಫ್ ನಿರ್ದೇಶಕ ಕೆ.ವಿ.ನಾಗರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್. ನರಸಿಂಹಯ್ಯ ಮಾತನಾಡಿದರು. ರೈತ ಸಂಘದ ರಾಜಪ್ಪ, ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಬಾಗೇಪಲ್ಲಿ ನಾರಾಯಣಸ್ವಾಮಿ, ಜೀವಿಕ ರತ್ನಮ್ಮ, ಸುಷ್ಮಶ್ರೀನಿವಾಸ್, ಗಂಗರಾಜು, ಎಸ್. ರಾಜಪ್ಪ, ವೆಂಕಟೇಶಪ್ಪ, ರಾಮಚಂದ್ರಪ್ಪ, ಈಶ್ವರಚಾರಿ, ಪಾಪಣ್ಣ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement