ಪಿಡಿಒಗಳು ಗ್ರಾಮಸ್ಥರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ
ಬಂಗಾರಪೇಟೆ: ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಕ್ಷೇತ್ರದ 26 ಗ್ರಾಮ ಪಂಚಾಯ್ತಿಗಳ ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳ ಮೌಲ್ಯಮಾಪನ ಮಾಡಿ ಅವರು ಮಾತನಾಡಿದರು.
26 ಪಂಚಾಯ್ತಿಗಳ ಪೈಕಿ ಬಹುತೇಕ ಪಂಚಾಯ್ತಿಗಳ ಪಿಡಿಒಗಳು ಕಚೇರಿಗೆ ಹಾಜರಾಗದೆ ಪಟ್ಟಣದಲ್ಲೇ ಕಾಲಹರಣ ಮಾಡುತ್ತಾರೆಂಬ ದೂರುಗಳು ನನ್ನ ಗಮನಕ್ಕೆ ಬಂದಿದೆ ಎಂದ ಶಾಸಕರು, ನಾನು ಪುರಸಭೆ ಸದಸ್ಯ, ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿ ಇಂದು ಶಾಸಕನಾಗುವ ಮಟ್ಟಕ್ಕೆ ಬೆಳೆದಿರುವುದಕ್ಕೆ ತಾವು ಕ್ಷೇತ್ರದಲ್ಲಿ ಕೈಕೊಂಡ ಅಭಿವೃದ್ಧಿಯೇ ಕಾರಣವಾಗಿದೆ. ಪುರಸಭೆಯನ್ನು ಅಭಿವೃದ್ಧಿಗೊಳಿಸಿದ ಮಾದರಿಯಲ್ಲಿ ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸುವ ಹಂಬಲವಿದೆ. ಇದಕ್ಕೆ ಪಿಡಿಒಗಳು ಕೈ ಜೋಡಿಸಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಆಶ್ರಮ ಯೋಜನೆಯ ಮನೆಗಳನ್ನು ನಿರೀಕ್ಷೆಯಂತೆ ನಿರ್ಮಾಣ ಮಾಡಿಲ್ಲ. ಇದಕ್ಕೆ ಪಿಡಿಒಗಳ ರಾಜಕೀಯವೇ ಕಾರಣವಾಗಿದ್ದು ಅರ್ಹ ಬಡವನಿಗೆ ಮನೆ ನೀಡದೆ ಹಿಂದಿನ ಶಾಸಕರ ಬೆಂಬಲಿಗರಿಗೆ ಮತ್ತು ಅವರು ಸೂಚಿಸುವವರಿಗೆ ಮನೆ ನೀಡಿ ಅವ್ಯವಹಾರ ಮಾಡಲಾಗಿದೆ. ಹೀಗಾಗಿ ಸರ್ಕಾರದ ಕನಸು ಈಡೇರಿಲ್ಲ. ಇನ್ನು ಮುಂದೆ ಅಂತಹ ತಪ್ಪುಗಳಿಗೆ ಜಾಗವಿಲ್ಲ. ಬಡವರಿಗೆ ಮಾತ್ರ ಸರ್ಕಾರದ ಯೋಜನೆಗಳು ಲಭ್ಯವಾಗಬೇಕೆ ವಿನಾ ಸದಸ್ಯರಿಗೆ ಅಧ್ಯಕ್ಷರ ಹಿಂಬಾಲಕರಿಗಲ್ಲ ಎಂದು ಎಚ್ಚರಿಕೆ ನೀಡಿದರು. ಪಂಚಾಯ್ತಿಗಳಲ್ಲಿ ಇದುವರೆಗೂ ಎಷ್ಟು ಕಂದಾಯ ವಸೂಲಿ ಮಾಡಿದ್ದೀರಿ ಎಂಬ ಪ್ರಶ್ನೆಗೆ ಯಾವ ಪಿಡಿಒಯಿಂದಲೂ ಉತ್ತರ ಬಂದಿಲ್ಲ ಪಂಚಾಯ್ತಿ ಆಸ್ತಿ ಮತ್ತಿತರ ವಿವರಗಳಿಗೆ ಪಿಡಿಒಗಳು ಮೌನವಹಿಸಿದ್ದರಿಂದ ಕೆರಳಿದ ಶಾಸಕರು, ಮುಂದಿನ ಸಭೆಯಲ್ಲಿ ಸಂಪೂರ್ಣ ವಿವರಗಳೊಂದಿಗೆ ಸಭೆಗೆ ಬರಬೇಕು ಎಂದು ಎಚ್ಚರಿಸಿದರು. ಪಿಡಿಒಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಗ್ರಾಮಗಳಲ್ಲಿ ಸಮಸ್ಯೆಗಳು ಇರುವುದಿಲ್ಲ ಜನರ ಸೇವೆಗಾಗಿ ನಾವಿರುವುದು ಎಂದು ತಿಳಿದು ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಇಒ ಕೆ.ಎಸ್.ಭಟ್ ಇದ್ದರು.