ಪೋಷಕರ ಕಿರುಕುಳ; ಗೃಹಿಣಿ ಆತ್ಮಹತ್ಯೆ
ಚಿಂತಾಮಣಿ: ಹಣಕಾಸಿನ ವಿಷಯವಾಗಿ ಗೃಹಣಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾರಾಮಪುರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಸೀತಾರಾಮಪುರ ಗ್ರಾಮದ ನಂದಿನಿ (19) ನೇಣಿಗೆ ಶರಣಾಗಿರುವ ಮಹಿಳೆ. ನಂದಿನಿ ತಂದೆ ರಮೇಶ್ ಹಾಗೂ ಅಳಿಯ ಶ್ರೀನಿವಾಸ್ ನಡುವೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಬಂದಿದ್ದು, ನಂದಿನಿಯನ್ನು ಗಂಡ ಶ್ರೀನಿವಾಸನಿಂದ ದೂರವಿಡಲು ಪೋಷಕರು ಒತ್ತಡ ಹೇರಿ ಗೃಹ ಬಂಧನದಲ್ಲಿಟ್ಟಿದ್ದರು ಎನ್ನಲಾಗಿದೆ. ಗಂಡನ ಜೊತೆ ನೆಮ್ಮದಿಯಿಂದ ಜೀವನ ಮಾಡಲು ಬಿಡದ ಪೋಷಕರ ಬಗ್ಗೆ ಬೇಸತ್ತು ಶ್ರೀನಿವಾಸ್ ಎಂಬ ಹೆಸರನ್ನು ಕೈ ಮೇಲೆ ಬರೆದುಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.