ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯಾವ ಭಾಷೆ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ

Rashmi Kasaragodu
Updated On : 30 Oct 2013, 12:07 pm


ಕ.ಪ್ರ.ವಾರ್ತೆ   ಕೋಲಾರ   ಅ.29
ಜನತ್ತಿನ ಯಾವ ಭಾಷೆ ಶ್ರೇಷ್ಠವೂ ಅಲ್ಲ. ಕನಿಷ್ಠವೂ ಅಲ್ಲ. ಆದರೆ, ಆಯಾ ಪ್ರಾದೇಶಿಕ ಭಾಷೆಗಳ ಬಗ್ಗೆ ದುರಾಭಿಮಾನ ಅಥವಾ ನಿರಭಿಮಾನ ಇರಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ ಆಶ್ರಯದಲ್ಲಿ ಇಲ್ಲಿನ ಟಿ. ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಬೇರೆ ರಾಜ್ಯದಲ್ಲಿ ಭಾಷಾ ಸಮಸ್ಯೆ ಇದ್ದರೂ ಬಹುತೇಕ ಕಡೆ ಅಲ್ಲಿನ ಜನರಲ್ಲಿ ಭಾಷೆಯ ಮೇಲೆ ಅಭಿಮಾನ ಇದೆ. ಇಂಗ್ಲಿಷ್ ಕಲಿತರೆ ಮಾತ್ರ ದೊಡ್ಡ ವ್ಯಕ್ತಿ, ಶ್ರೀಮಂತನಾಗಬಹುದು, ಐಟಿ-ಬಿಟಿ  ಕಂಪನಿಗಳಲ್ಲಿ  ದೊಡ್‌ಡ ಹುದ್ದೆ ಗಟ್ಟಿಸಿಕೊಳ್ಳಬಹುದೆಂಬ ತಪ್ಪು ಕಲ್ಪನೆ ಇದೆ. ಜಾಗತೀಕರಣ ಉದಾರೀಕರಣ, ಖಾಸಗೀಕರಣದಿಂದಾಗಿ ಇಂಗ್ಲಿಷ್ ಬಳಕೆ ಹೆಚ್ಚುತ್ತಿದೆ ಎಂದರು.
ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿರುವುದರಿಂದ ಯಾವುದೇ ಕಾರಣಕ್ಕೂ ಭಾಷೆ ನಶಿಸಲು ಸಾಧ್ಯವೇ ಇಲ್ಲ. ಆದರೆ, ಕನ್ನಡದ ಬಗ್ಗೆ ಸ್ವಾಭಿಮಾನಿಗಳಾಗಬೇಕು. ದುರಭಿಮಾನಿ, ನಿರಭಿಮಾನಿಗಳಾಗುವುದು ಬೇಡ ಎಂದು ಕಿವಿಮಾತು ಹೇಳಿದರು.
ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಆಗದಿದ್ದರೆ ಅನಕ್ಷರಸ್ಥನಿಗೆ ಕಷ್ಟವಾಗುತ್ತದೆ ಹಾಗಾಗಿ ಕೋರ್ಟ್‌ಗಳಲ್ಲಿ ಕನ್ನಡ ಬಳಕೆ ಆಗಬೇಕೆಂದರು.
ಇಡೀ ಭಾರತದಲ್ಲಿ ಯಾವುದೂ ರಾಷ್ಟ್ರ ಭಾಷೆ ಅಲ್ಲ. ಎಲ್ಲವೂ ಪ್ರಾದೇಶಿಕ ಭಾಷೆಗಳೇ. ಎಲ್ಲವೂ ರಾಷ್ಟ್ರ ಭಾಷೆಗಳೇ. ಎಲ್ಲ ಭಾಷೆಗಳ ಒಕ್ಕೂಟದ ವ್ಯವಸ್ಥೆಯೇ ಭಾರತ ದೇಶ, ಕನ್ನಡ ಸೇರಿದಂತೆ ಎಲ್ಲ ಭಾಷೆಗೂ ಸಮಾನ ಗೌರವ ನೀಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಪ್ರತಿಪಾದಿಸಿದರು.
ಸ್ವಾತಂತ್ರ್ಯದ ನಂತರ  ಪ್ರಾದೇಶಿಕ ಭಾಷೆಗಳು ಪ್ರಾಮುಖ್ಯತೆ ಪಡೆದವು. 1956 ರಲ್ಲಿ ಏಕೀಕರಣದ ನಂತರ ಚಳುವಳಿಗಳು ಭಾಷೆಯ ಆಧಾರದ ಮೇಲೆ  ರಾಜ್ಯಗಳನ್ನು ವಿಂಗಡಣೆ ಮಾಡಲಾಯಿತು. ಏಕೀಕರಣ ಆಗಿ 58 ವರ್ಷಕ್ಕೆ ಕಾಲಿಡುತ್ತಿದ್ದರೂ ಎಲ್ಲೋ ಒಂದು ಕಡೆ ನಮ್ಮ ಭಾಷೆಗೆ ನಮ್ಮ ರಾಜ್ಯದಲ್ಲಿ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಇದಕ್ಕೆ ನಮ್ಮವರಲ್ಲೇ ಕೀಳರಿಮೆ, ತಾತ್ಸಾರ, ಉದಾಸೀನ ಮನೋಭಾವ ಇದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಶ್ರೀ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ  ಡಾ. ಪಿ.ಎಫ್. ಕೊಟ್ಟೂರ್, ತೋಗಾರಿಕೆ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಎಚ್.ಕೆ. ಶ್ರೀಕಂಠ, ವಿವಿಯ  ಶಿಕ್ಷಣ ನಿರ್ದೇಶಕ ಡಾ. ಬಿ. ರಾಜು, ಬಾಗಲಕೋಟೆ ತೋಟಗಾರಿಕೆ ವಿವಿ ಡೀನ್  ಡಾ.ಎಂ.ಬಿ. ಗುಳೇದ್, ಶಿರಸಿ ತೋಟಗಾರಿಕೆ ಕಾಲೇಜಿನ  ಡೀನ್ ಡಾ. ಎನ್. ಬಸವರಾಜು, ಬಾಲಗಕೋಟೆಯ  ಡೀನ್ ಡಾ. ಪಿ. ಚಿದಾನಂದ ಪಿ. ಮನ್ಸೂರ್,  ಬೀದರ್ ಮಹಾವಿದ್ಯಾಲಯದ  ಡೀನ್  ಡಾ.ಸಿ.ಎನ್. ಹಂಚಿಮನಿ, ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ  ಡೀನ್ ಡಾ. ವಿ. ನಾಚೇಗೌಡ ಇದ್ದರು. ಬಾಗಲಕೋಟೆ ತೋಟಗಾರಿಕೆ ವಿವಿ (ವಿದ್ಯಾರ್ಥಿಕಲ್ಯಾಣ) ಡೀನ್ ಡಾ. ವೈ.ಕೆ. ಕೋಟಿಕಲ್ ಸ್ವಾಗತಿಸಿದರು. ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ಸಂಗೀತದ ಮೂಲಕ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement