ರಾಜಘಟ್ಟ ಅಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ
ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಗ್ರಾಮದ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹುಂಡಿ ಕಳ್ಳತನ ನಡೆದಿದೆ. ಸೋಮವಾರ ರಾತ್ರಿ ಹುಂಡಿ ಕಳವು ಮಾಡಿರುವ ದುಷ್ಕಮಿಗಳು ಸುಮಾರು 25 ಸಾವಿರ ನಗದು ದೋಚಿದ್ದಾರೆ ಎನ್ನಲಾಗಿದೆ. ರಾತ್ರಿ 9 ಗಂಟೆ ನಂತರ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ.
ದೇವಾಲಯದ ಪಡಸಾಲೆಯಲ್ಲಿದ್ದ ದೊಡ್ಡ ಹುಂಡಿಯನ್ನು ಒಡೆಯಲು ವ್ಯರ್ಥ ಪ್ರಯತ್ನ ನಡೆಸಿರುವ ದುಷ್ಕರ್ಮಿಗಳು ಗರ್ಭ ಗುಡಿಯ ಪಕ್ಕದಲ್ಲಿದ್ದ ಹುಂಡಿಯನ್ನು ಒಡೆದಿದ್ದಾರೆ. ದೊಡ್ಡಹುಂಡಿಗೆ ಇತ್ತೀಚೆಗಷ್ಟೇ ಮುಜರಾಯಿ ಇಲಾಖೆ ಸೀಲ್ ಮಾಡಿದ್ದರು. ಕಳುವಾಗಿರುವ ಹುಂಡಿ ಅರ್ಚಕರೊಬ್ಬರ ಸುಪರ್ದಿನಲ್ಲಿತ್ತು ಎನ್ನಲಾಗಿದೆ.
ಈ ಬಗೆಯ ದುಷ್ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ದೊಡ್‌ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಸಬಾ ಕಂದಾಯ ಅಧಿಕಾರಿ ರಜನಿಕಾಂತರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.