ಸಿಮೆಂಟ್ ರಸ್ತೆ ಕಾಮಗಾರಿ ಶೀಘ್ರ ಮುಗಿಸಿ
ಕ.ಪ್ರ.ವಾರ್ತೆ ಕೋಲಾರ ಅ.29
ನಗರದ ಸರ್ಕಾರಿ ಬಸ್ನಿಲ್ದಾಣದ ಪ್ರಾಂಗಣದಲ್ಲಿ ಅರ್ಧಕ್ಕೆ ಮಾತ್ರ ಕಾಂಕ್ರಿಟ್ ಹಾಕಿದ್ದು ಉಳಿದ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಬಸ್ ನಿಲ್ದಾಣಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು, ಬಸ್ ನಿಲ್ದಾಣದ ಅಭಿವೃದ್ಧಿಗೆ ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಜನತೆಗೆ ಭರವಸೆ ನೀಡಿದರು.
ಅಡ್ಡದಾರಿ ತೆರವುಗೊಳಿಸಲು ಒತ್ತಾಯ: ಬಸ್ನಿಲ್ದಾಣದಲ್ಲಿ ಕಳ್ಳರು ಮತ್ತು ಪೋಲಿ ಪುಂಡರ ಕಾಟವನ್ನು ತಪ್ಪಿಸಲು ಜನತೆಯ ಕೋರಿಕೆಯ ಮೇರೆಗೆ ನಿಲ್ದಾಣಕ್ಕಿದ್ದ ಅಡ್ಡದಾರಿಯೊಂದನ್ನು ಇತ್ತೀಚೆಗೆ ಸಾರಿಗೆ ಸಂಸ್ಥೆ ಬಂದ್ ಮಾಡಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಸಾರಿಗೆ ಸಚಿವರು ನಿಲ್ದಾಣಕ್ಕೆ ಭೇಟಿ ನೀಡಿ ವಿವಾದಿತ ಜಾಗ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಹಾಗೂ ಅಂಗಡಿ ಮಾಲೀಕರು ಗೋಡೆ ಮುಚ್ಚಿರುವುದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ ಎಂದು ದೂರಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಸಹ ದನಿ ಗೂಡಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.
ಆದರೆ, ಸಾರ್ವಜನಿಕರು ಅಡ್ಡಗೋಡೆ ಮುಚ್ಚಿದ ನಂತರ ಬಸ್ ನಿಲ್ದಾಣದಲ್ಲಿ ಕಳ್ಳತನಗಳು ಕಡಿಮೆಯಾಗಿವೆ. ಪ್ರಾಯಾಣಿಕರ ಮತ್ತು ಕೆ.ಎಸ್.ಆರ್.ಟಿ.ಸಿ.ಯ ಆಸ್ತಿ ಸಂರಕ್ಷಣೆಗಾಗಿ ಗೋಡೆಯನ್ನು ಕೆಡವದಂತೆ ಮನವಿ ಮಾಡಿದರು. ಸಚಿವರನ್ನು ಭೇಟಿಯಾದ ಪತ್ರಕರ್ತರು ಸಹ ಕೆಲವರ ಸ್ವಾರ್ಥಕ್ಕಾಗಿ ಗೋಡೆ ಕೆಡುವುದರಲ್ಲಿ ಅರ್ಥವಿಲ್ಲ ಎಂದಾಗ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಗಡಿ ಮಾಲೀಕರ ಪರವಾಗಿ ಕಾಂಗ್ರೆಸ್ ಮುಖಂಡರೊಬ್ಬರು ವಕಾಲತ್ತು ವಹಿಸಿ ಪತ್ರಕರ್ತರ ವಿರುದ್ದ ಕೂಗಾಡಿದ ಪ್ರಸಂಗವೂ ನಡೆಯಿತು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಕಾರ್ಯಕರ್ತನಿಗೆ ಬುದ್ದಿ ಹೇಳಿದಲ್ಲದೆ ಪತ್ರಕರ್ತರಿಗೆ ಸಮಾಧಾನ ಹೇಳಿದರು.
ಕೆಲವರ ಮರ್ಜಿಗೆ ಒಳಗಾಗಿ ಗೋಡೆ ಕೆಡವಿದ್ದೇ ಆದಲ್ಲಿ ನಿಲ್ದಾಣದಲ್ಲಿ ಮತ್ತೆ ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.
ಅಧಿಕಾರಿಗೆ ಎಚ್ಚರಿಕೆ: ಕೆಜಿಎಫ್ ನಗರದಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿದ್ದರೂ, ಪ್ರಯಾಣಿಕರು ಬರುತ್ತಿಲ್ಲವೆಂಬ ಕುಂಟು ನೆಪ ಹೇಳಿ ಬಸಸ್ನಿಲ್ದಾಣದ ಬಳಕೆಗೆ ಉದಾಸೀನ ತೋರಲಾಗುತ್ತಿದೆ ಎಂದು ಪತ್ರಕರ್ತರು ತಿಳಿಸಿದಾಗ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಿ, ಹೊಸ ನಿಲ್ದಾಣದಿಂದಲೇ ಸರ್ಕಾರಿ ಬಸ್ಸುಗಳು ಚಾಲ್ತಿ ಆಗಬೇಕು, ನಾಳೆಯಿಂದಲೇ ಅಲ್ಲಿಗೆ ಬಸ್ಸುಗಳು ಹೋಗಿ ನಿಲ್ಲಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ಡಿಸಿಸಿ ಅಧ್ಯಕ್ಷ ಅನಿಲ್ಕುಮಾರ್, ನಗರಸಭಾ ಸದಸ್ಯ ಪ್ರಸಾದ್ಬಾಬು, ಮುಖಂಡರಾದ ಇಕ್ಬಾಲ್ ಅಹಮದ್, ಜಯದೇವ್, ಕುಮರ್, ಮಂಜುನಾಥ್ ಮತ್ತಿತರರಿದ್ದರು.