ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ 25 ಲಕ್ಷ ಸಾಲ: ಸಚಿವ ಮುನಿಯಪ್ಪ
ಕ.ಪ್ರ.ವಾರ್ತೆ ಕೋಲಾರ ಅ.29
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಕೈಗಾರಿಕೆ ಸ್ಥಾಪಿಸುವ ಮಹಿಳೆಯರಿಗೆ ಭದ್ರತಾ ರಹಿತ 25 ಲಕ್ಷ ರು.ಸಾಲ ನೀಡುವುದಾಗಿ ಹಾಗೂ ಶೇ.25 ರಷ್ಟು ಸಬ್ಸಿಡಿ ಸೌಲಭ್ಯವಿರುವುದಾಗಿ ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಕೈಮಗ್ಗ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ವಸ್ತ್ರಸಿರಿ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಲು ಅವರಿಗೆ ಅಗತ್ಯ ತರಬೇತಿ ನಂತರ ಕೈಗಾರಿಕೆ ಸ್ಥಾಪಿಸಲು ಅಗತ್ಯವಾದ ಹಣಕಾಸಿನ ನೆರವು, ಮಾರುಕಟ್ಟೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ನೇಕಾರರ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ವಸತಿ ಕಾರ್ಯಾಗಾರ ಯೋಜನೆ, ದುಡಿಮೆ ಬಂಡವಾಳ ಯೋಜನೆ, ಮಗ್ಗ ಮತ್ತು ಸಲಕರಣೆಗಳ ಸರಬರಾಜು ಯೋಜನೆ, ಸಾಮಾನ್ಯ ಸೌಲಭ್ಯ ಕೇಂದ್ರ ಯೋಜನೆ, ನೇಕಾರರ ಕಲ್ಯಾಣ ಯೋಜನೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಹೀಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸುವರ್ಣ ವಸ್ತ್ರ ನೀತಿ ಯೋಜನೆಯಡಿ 27 ಲಕ್ಷ ವೆಚ್ಚದಲ್ಲಿ ಆಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದ ಅವರು, ಇಲ್ಲಿ ತರಬೇತಿಯನ್ನು ಉಚಿತವಾಗಿ ನೀಡುವುದಲ್ಲದೇ 2 ಸಾವಿರ ರು. ಶಿಷ್ಯ ವೇತನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ವಿಠಲರಾಜು, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್, ನಗರಸಭಾ ಸದಸ್ಯ ಪ್ರಸಾದ್ಬಾಬು, ಕೆಜಿಎಫ್ನ ಕೆ. ರಾಜೇಂದ್ರನ್, ಮುಖಂಡರಾದ ಕುಮಾರ್, ಜಯದೇವ್ ಮತ್ತಿತರರು ಇದ್ದರು.