ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ಲಂಚ ಪಡೆದ ಕಾರ್ಯಕರ್ತೆ ಲೋಕಾ ಬಲೆಗೆ
ಕೋಲಾರ: ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ಅರ್ಜಿದಾರರೊಬ್ಬರಿಂದ 10 ಸಾವಿರ ರು. ಲಂಚ ಪಡೆದ ನಗರದ ಗಲಲ್ಪೇಟೆಯ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯೊಬ್ಬರು ಬುಧವಾರ ಸಂಜೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪ್ರಭಾವತಿ ಎಂಬುವರೇ ಆರೋಪಿಯಾಗಿದ್ದು ವೇಮಗಲ್ ಹೋಬಳಿಯ ಶೆಟ್ಟಿಹಳ್ಳಿ ನಿವಾಸಿ ರೂಪ ಎಂಬುವರು ನೀಡಿದ ದೂರಿನ್ವಯ ಆರೋಪಿಯನ್ನು ಬಲೆಗೆ ಬೀಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ ಜಿಲ್ಲಾ ಲೋಕಾಯುಕ್ತ ಎಸ್ಪಿ ಮೋಹನ್ದಾಸ್, ಡಿವೈಎಸ್ಪಿ ರಾಮಮೂರ್ತಿ, ಇನ್ಸ್ಪೆಕ್ಟರ್ ಅಶ್ವತ್ಥನಾರಾಯಣ ನಗರದ ಜೀವ ವಿಮಾ ನಿಗಮದ ಕಚೇರಿ ಸಮೀಪದ ಕೀಲುಕೋಟೆ ಶಾಖೆಗೆ ಸೇರಿದ ಪ್ರಗತಿ ಗ್ರಾಮೀಣ ಬ್ಯಾಂಕಿನ ಬಳಿ ರೂಪ ಕೈಯಿಂದ ಹಣ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ದೂರುದಾರರಾದ ರೂಪ ಅಂಗನವಾಡಿ ಶಿಕ್ಷಕಿ ಹುದ್ದೆಗೆ ಅರ್ಜಿ ಹಾಕಿಕೊಂಡಿದ್ದರು. ಕೆಲಸ ಕೊಡಿಸುವುದಾಗಿ ಗಲ್ಪೇಟೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿ ಆಶ್ವಾಸನೆ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ 50 ಸಾವಿರ ರು. ನೀಡಿದರೆ ಕೆಲಸ ಗ್ಯಾರೆಂಟಿ ಎಂದು ತಿಳಿಸಿದ್ದರು. ಆದರೆ. ರೂಪ, ತಾನು ವಿಧವೆಯಾಗಿದ್ದು 50 ಸಾವಿರ ರು. ಕೊಡಲು ಕಷ್ಟವಾಗುತ್ತದೆ ಎಂದಾಗ ಕನಿಷ್ಠ 20 ಸಾವಿರ ರು. ನೀಡಿದಲ್ಲಿ ಮಾತ್ರ ಕೆಲಸ ಕೊಡಿಸುವುದಾಗಿ ಹೇಳಿದಾಗ ಒಪ್ಪಿ ಬುಧವಾರ ಸಂಜೆ 10 ಸಾವಿರ ಮುಂಗಡವಾಗಿ ನೀಡುವಾಗ ಲೋಕಾಯುಕ್ತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.