ಅಟ್ರಾಸಿಟಿ ಸಭೆಗೆ ದಲಿತ ಮುಖಂಡರ ಬಹಿಷ್ಕಾರ
ಕ.ಪ್ರ. ವಾರ್ತೆ, ಕೋಲಾರ, ಅ.30
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಕರೆದಿದ್ದ ಪರಿಶಿಷ್ಟರ ಕುಂದುಕೊರತೆಗಳ ಸಭೆಗೆ ಜಿಲ್ಲಾಧಿಕಾರಿಗಳ ಆಗಮನ ವಿಳಂಬವಾಗಿದ್ದರಿಂದ ದಲಿತ ಮುಖಂಡರು ಅಸಮಾಧಾನಗೊಂಡು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಅಟ್ರಾಸಿಟಿ ಸಭೆಯನ್ನು ಬೆಳಿಗ್ಗೆ 11 ಕರೆಯಲಾಗಿತ್ತು. ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ , ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೆನರಾ ಬ್ಯಾಂಕಿನ ಅಧ್ಯಕ್ಷ ಆರ್.ಕೆ. ದುಬೆ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಆಡಳಿತದ ಪರವಾಗಿ ಜಿಲ್ಲಾಧಿಕಾರಿ ಡಿ.ಕೆ.ರವಿ ಹಾಜರಾಗಬೇಕಾಗಿದ್ದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಅವರಿಗೆ ತಾವು ಬರುವವರೆಗೆ ಸಭೆ ನಡೆಸುವಂತೆ ಸೂಚಿಸಿದ್ದರು.
ಸಭೆಯನ್ನು 11.40ಕ್ಕೆ ಹೆಚ್ಚುವರಿ ಡಿಸಿಯವರು ಎಸ್ಪಿ ರಾಮ್ನಿವಾಸ್ ಸಾಪಟ್ ಹಾಗೂ ಕೆಜಿಎಫ್ ಎಸ್ಪಿ ರೋಹಿಣಿ ಕಟೂಚ್ ಜೊತೆಗೂಡಿ ಆರಂಭಿಸಿದಲಾದರೂ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು ಈ ಸಭೆಯನ್ನು ಕರೆದಿರುವುದು ಜಿಲ್ಲಾಧಿಕಾರಿಗಳು. ಅವರ ಅಧ್ಯಕ್ಷತೆಯಲ್ಲೇ ಸಭೆ ನಡೆಯಬೇಕು. ನಿಮ್ಮಿಂದ ಪ್ರಮುಖ ಬೇಡಿಕೆಗಳು ಈಡೇರಿಸಲು ಸಾಧ್ಯವಿಲ್ಲವೆಂದು ತಿಳಿಸಿದರು. ದಲಿತ ಮುಖಂಡರ ಮನಮೊಲಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಕಡೆಗೆ ವಿಜಯಕುಮಾರ್ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮುಖೇನ ಸಂಪರ್ಕಿಸಿ ವಿಷಯ ತಿಳಿಸಿದರು. ಕೇಂದ್ರ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿದ್ದ ಜಿಲ್ಲಾಧಿಕಾರಿಗಳು ದಲಿತ ಮುಖಂಡರ ಪ್ರತಿಭಟನೆ ವಿಷಯ ತಿಳಿದರು.
ಅಟ್ರಾಸಿಟಿ ಸಭೆಗೆ ಹೋಗಬೇಕಾಗಿರುವುದರಿಂದ ಅನುಮತಿ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿ ಕಾರ್ಯಕ್ರಮದಿಂದ ನಿರ್ಗಮಿಸಿದ ಡಿಸಿಯವರು ಅಲ್ಲಿಂದ ನೇರವಾಗಿ ಅಂಬೇಡ್ಕರ್ ಭವನಕ್ಕೆ ಬರುತ್ತಿದ್ದಂತೆ ಕುಪಿತರಾಗಿದ್ದ ದಲಿತ ಮುಖಂಡರು ಅಟ್ರಾಟಿಸಿ ಸಭೆಗೆ ತಾವೇ ತಡವಾಗಿ ಬಂದರೆ ಹೇಗೆ, ದಲಿತರ ಬಗ್ಗೆ ನಿಮಗೆ ಕಾಳಜಿ ಇಲ್ಲವೆಂದು ಪ್ರತಿಭಟಿಸಿದರು.
ಈ ಸಭೆಯಲ್ಲಿ ಪರಿಶಿಷ್ಟರ ಅಟ್ರಾಸಿಟಿ ಪ್ರಕರಣಗಳು, ಸರ್ಕಾರದ ಸವಲತ್ತುಗಳ ವಿನಿಯೋಗ, ಹಂಚಿಕೆ ಹೀಗೆ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಬೇಕಾಗಿತ್ತು ಆದರೆ ಅಧ್ಯಕ್ಷತೆ ವಹಿಸಿರುವ ಅಧಿಕಾರಿಗಳ ಗೈರಿನಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುವ ನಂಬಿಕೆ ಇಲ್ಲ ಎಂದು ಮುಖಂಡರು ಆರೋಪಿಸಿದರು.
ಕೇಂದ್ರ ಸಚಿವರೊಂದಿಗೆ ಜಿಲ್ಲೆಯ ಕುಡಿಯುವ ನೀರಿನ ಬಗ್ಗೆ ಚರ್ಚಿಸಬೇಕಾಗಿತ್ತು. ತಡವಾಗಿ ಬಂದಿರುವುದಕ್ಕೆ ವಿಷಾಧಿಸುತ್ತೇನೆ, ಸಭೆಗೆ ಬಂದು ಸಹಕಾರ ನೀಡುವಂತೆ ಡಿಸಿ ಡಿ.ಕೆ. ರವಿ ಮನವಿ ಮಾಡಿದರಾದರೂ ಜಗ್ಗದ ದಲಿತ ಮುಖಂಡರು ಸಭೆಯಿಂದ ಹೊರಗುಳಿದರು.
ದಲಿತ ಸಂಘಟನೆಗಳ ಸಂಯುಕ್ತ ರಂಗದ ಸಂಸ್ಥಾಪಕ ಡಾ. ಚಂದ್ರಶೇಖರ್, ಮುಖಂಡರಾದ ಮುನಿರಾಜು, ನಾಗನಾಳ ಮುನಿಯಪ್ಪ, ಸಾಹುಕಾರ್ ಶಂಕರಪ್ಪ, ಟಿ.ವಿಜಯಕುಮಾರ್, ಪಿವಿಸಿ ಕೃಷ್ಣಪ್ಪ, ಡಿಪಿಎಸ್ ಮುನಿರಾಜು, ಹೂವಳ್ಳಿ ಪ್ರಕಾಶ್, ನರಸಿಂಹಯ್ಯ ನಾಗೇಶ್, ಪ್ರಭಾವತಿ, ರತ್ನಮ್ಮ, ಪದ್ಮ ಸಭೆ ಬಹಿಷ್ಕರಿಸಿದವರಲ್ಲಿ ಪ್ರಮುಖರಾಗಿದ್ದಾರೆ.