ಕಳಪೆ ಆಹಾರ ಪೂರೈಕೆ ಆರೋಪ ಜಿಲ್ಲಾಧಿಕಾರಿಯಿಂದ ಪರಿಶೀಲನೆ
ಕ.ಪ್ರ.ವಾರ್ತೆ ಕೋಲಾರ ಅ.30
ನಗರದ ನಚಿಕೇತ ನಿಲಯದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಮತ್ತು ಮೂಲ ಸೌಕರ್ಯಗಳು ಇಲ್ಲವೆಂದು ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಮುದ್ದೆ, ಅನ್ನ ಸಂಬಾರು ಸಮೇತ ಬೀದಿಗೆ ಬಂದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು, ವಿದ್ಯಾರ್ಥಿಗಳಿಂದ ಅನ್ನ ಸಂಬಾರು ಸ್ವತಃ ಸೇವನೆ ಮಾಡಿ, ಒಳ್ಳೆಯ ಅಕ್ಕಿಯನ್ನೇ ಬಳಸಿದ್ದಾರೆ, ಮುಗ್ಗಲು ಅಕ್ಕಿ ಅಂತ ಏಕೆ ಆರೋಪ ಮಾಡುತ್ತಿದ್ದೀರಾ, ಹುಳುಗಳು ಇಲ್ಲವೆಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಬಡ ವಿದ್ಯಾರ್ಥಿಗಳಾದ ತಾವು ಆಹಾರದ ಮಹತ್ವ ತಿಳಿಯಬೇಕು, ಈ ರೀತಿ ಆಹಾರವನ್ನು ಬೀದಿ ತಂದು ಪ್ರದರ್ಶನ ಮಾಡುವುದು ಸರಿಯಲ್ಲ, ನಿಮ್ಮ ಆರೋಪಗಳಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಖಂಡಿತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವೆ ಎಂದರು.
ಹಾಸ್ಟೆಲ್ನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂದು ವಿದ್ಯಾರ್ಥಿಗಳು ದೂರಿದಾಗ, ಸಂಬಂಧಪಟ್ಟ ಅಧಿಕಾರಿಯನ್ನು ಹಾಸ್ಟೆಲ್ಗೆ ಭೇಟಿ ನೀಡುವಂತೆ ತಕ್ಷಣ ಸೂಚಿಸುತ್ತೇನೆ, ಏನೇ ಸಮಸ್ಯೆ ಇದ್ದರೂ ಅವರ ಬಳಿ ತಿಳಿಸಿ ಪರಿಹಾರ ಕಂಡುಕೊಳ್ಳಿ, ಒಂದು ವೇಳೆ ಆ ಅಧಿಕಾರಿಯಿಂದ ಸಮಸ್ಯೆ ನಿವಾರಣೆ ಆಗದಿದ್ದರೆ ನಾನೇ ಬಂದು ನಿವಾರಣೆ ಮಾಡುತ್ತೇನೆಂದು ಭರವಸೆ ನೀಡಿದರು. ನಾನು ಸಹ ಹಾಸ್ಟೆಲ್ನಲ್ಲೇ ಓದಿ ಈಗ ದೊಡ್ಡ ಹುದ್ದೆಯಲ್ಲಿ ಇದ್ದೇನೆ, ಹಾಸ್ಟೆಲ್ನಲ್ಲಿ ಸಮಸ್ಯೆಗಳು ಇಲ್ಲವೆಂದು ಹೇಳುವುದಿಲ್ಲ, ನಮ್ಮ ಕಾಲಕ್ಕೆ ಹೊಲಿಕೆ ಮಾಡಿದರೆ ನೀವು ಅದೃಷ್ಟವಂತರು. ರಾಷ್ಟ್ರ ಕಟ್ಟುವ ಜವಾಬ್ದಾರಿ ಇರುವುದರಿಂದ ಏನೇ ದೂರುಗಳು ಇದ್ದರೂ ಅದರಲ್ಲಿ ಪ್ರಾಮಾಣಿಕತೆ ಇದ್ದರೆ ನ್ಯಾಯ ಸಿಗುತ್ತದೆ ಎಂದು ಕಿವಿಮಾತು ಹೇಳಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದ ಚಂದ್ರಶೇಖರ್, ವೆಂಕಟೇಶ್ ಪ್ರಸಾದ್, ಕಿರಣ್ಕುಮಾರ್, ಆಂಜಪ್ಪ, ಶಾಂತಕುಮಾರ್, ಮಣಿಕಂಠ, ಕೃಷ್ಣಪ್ಪ ಇದ್ದರು.