ಖಾಸಗಿ ನೀರು ಟ್ಯಾಂಕರ್ ಸ್ಥಗಿತ: ಕುಡಿವ ನೀರಿಗಾಗಿ ಹಾಹಾಕಾರ
ಆರ್. ರಜನೀಕಾಂತ್
ಕೆಜಿಎಫ್: ಖಾಸಗಿ ನೀರು ಟ್ಯಾಂಕರ್ ಮತ್ತು ಕೊಳವೆ ಬಾವಿ ಮಾಲೀಕರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಾದ್ಯಂತ ನೀರು ಸರಬರಾಜು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗೆ ಮುಂದುವರೆದಿದಲ್ಲಿ ಪರಿಸ್ಥಿತಿ ತೀರಾ ಹದೆಗೆಡುವ ಸಾಧ್ಯತೆ ಇರುವುದರಿಂದ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಒಂದೆಡೆ ಮರಳು ಮಾಫಿಯಾ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಕೆರೆ ನದಿಗಳು ಬತ್ತಿಹೋಗಿ ಅಂತರರ್ಜಲ ಕುಸಿದಿದೆ. ಮತ್ತೊಂದೆಡೆ ನಗರದ ನೀರು ಸರಬರಾಜು ಮಂಡಳಿ ಮತ್ತು ನಗರಸಭೆ ಜಂಟಿಯಾಗಿ ಕ್ಷೇತ್ರದ ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶ ಮತ್ತು ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳಿಗೆ ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯೆತೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಕೃಷಿ ಚಟುವಟಿಕೆ ಮಾಡದೆ ಖಾಸಗಿ ಟ್ಯಾಂಕರ್ಗಳಿಗೆ ಪ್ರತಿದಿನ ನೀರನ್ನು ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಕಳೆದ 6 ತಿಂಗಳಿಂದ ಬೆಸ್ಕಾಂ ವಿಜಿಲಿಯನ್ಸ್ ಅಧಿಕಾರಿಗಳು ಕೃಷಿ ಮಾಲೀಕರಿಗೆ ನೋಟಿಸ್ ಜಾರಿಮಾಡಿದ್ದು, ಕೊಳವೆ ಬಾವಿಗಳಿಗೆ ವಾಣಿಜ್ಯ ವಿದ್ಯುತ್ ಬಿಲ್ ಕಟ್ಟಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಕೊಳವೆ ಬಾವಿ ಮಾಲೀಕರು ಖಾಸಗಿ ಟ್ಯಾಂಕರ್ಗಳಿಗೆ ನೀರನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ.