ಚಿಕ್ಕಬಳ್ಳಾಪುರ ಎಪಿಎಂಸಿ ಅಧ್ಯಕ್ಷ ಕೆ.ವಿ. ವಾಸುದೇವನ್, ಉಪಾಧ್ಯಕ್ಷರಾಗಿ ಈರಚಿನ್ನಪ್ಪ
ಚಿಕ್ಕಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೊಳವನಹಳ್ಳಿಯ ಕೆ.ವಿ. ವಾಸುದೇವನ್ ಹಾಗೂ ಉಪಧ್ಯಾಕ್ಷರಾಗಿ ಗೊಳ್ಳು ಗ್ರಾಮದ ಈರಚಿನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಟಿಎಪಿಸಿಎಂಎಸ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ವಿ. ವಾಸದೇವನ್ ಹಾಗೂ ಉಪಧ್ಯಾಕ್ಷ ಸ್ಥಾನಕ್ಕೆ ಈರಚಿನ್ನಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು. ಸಂಘದ 13 ನಿರ್ದೇಶಕ ಸ್ಥಾನಗಳಿಗೆ ಅ.15 ರಂದು ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ 8 ನಿರ್ದೇಶಕರು ಬಿ ವರ್ಗದಿಂದ ಮತ್ತು ಶಾಸಕ ಕೆ. ಸುಧಾಕರ್ ಬೆಂಬಲಿತ 5 ಮಂದಿ ನಿರ್ದೇಶಕರು ಎ ವರ್ಗದಿಂದ ಆಯ್ಕೆಯಾಗಿದ್ದರು.
ಜೆಡಿಎಸ್ ಖುಷಿ: ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಮುಖಂಡರು ಸಿಹಿ ಹಂಚಿ ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ನಲ್ಲಿ ಅಧಿಕಾರದ ಚುಕ್ಕಾಣಿಯು ಜೆಡಿಎಸ್ಗೆ ಸಿಕ್ಕಿದ್ದರೂ ಪಕ್ಷಾತೀತವಾಗಿ ರೈತಪರ ಆಡಳಿತ ನಡೆಸುವ ಮೂಲಕ ಜನರ ಮೆಚ್ಚುಗೆ ಪಡೆಯಲಾಗುವುದು. ಅಲ್ಲದೇ ಈ ಚುನಾವಣೆಯಲ್ಲಿ ಸಾಧಿಸಿದ ಜಯವನ್ನು ಮುಂದಿನ ಸ್ಥಳೀಯ ಚುನಾವಣೆಗಳಲ್ಲೂ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗರಾಜ್ ತಿಳಿಸಿದರು.