ಬಾಲ್ಯ ವಿವಾಹಕ್ಕೆ ತಡೆ
ಗುಡಿಬಂಡೆ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಿವಾಹ ಮಾಡುತ್ತಿದ್ದ ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪೋಷಕರ ಮನವೊಲಿಸಿ ವಿವಾಹ ನಿಲ್ಲಿಸಿದ ಘಟನೆ ತಾಲೂಕಿನ ಗವಿಕುಂಟಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಘಟನೆ ಹಿನ್ನೆಲೆ: ಗವಿಕುಂಟಹಳ್ಳಿ ಗ್ರಾಮದ 13 ವರ್ಷದ ಲಲಿತಾ (ಹೆಸರು ಬದಲಿಸಿದೆ) ಎಂಬ ಬಾಲಕಿಗೆ ಆಕೆಯ ಪೋಷಕರು ಬುಧವಾರ ಬೆಳಿಗ್ಗೆ ಗ್ರಾಮದ ಸಮೀಪದ ದೇವಾಲಯದಲ್ಲಿ ವಿವಾಹ ಮಾಡಲು ಸಿದ್ಧತೆ ನಡೆಸಿದ್ದರು.
ಈ ಸಂದರ್ಭದಲ್ಲಿ ವಿಷಯ ತಿಳಿದು ಕಾರ್ಯಪ್ರವೃತ್ತರಾದ ಸಿಡಿಪಿಒ ಸಿದ್ದಲಿಂಗಪ್ಪ ಪೊಲೀಸರೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಬಾಲಕಿಯ ಪೋಷಕರಿಗೆ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬಾಲಕಿಯನ್ನು ಸ್ಥಳೀಯ ಮುಖಂಡರು ಹಾಗೂ ಶಿಕ್ಷಕರ ಕಣ್ಗಾವಲಿನಲ್ಲಿ ಸುರಕ್ಷಿತವಾಗಿರುವಂತೆ ಏರ್ಪಾಡು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.