ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಂದಿರಾಗಾಂಧಿ ಕನಸು ನನಸು ಮಾಡಿ

Rashmi Kasaragodu
Updated On : 1 Nov 2013, 12:11 pm

ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಕರೆ

ಕನ್ನಡಪ್ರಭ ವಾರ್ತೆ, ಕೋಲಾರ, ಅ.31
ಬಡವರ ಉದ್ಧಾರಕ್ಕಾಗಿ 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ, ಕೆಲವರ ಕಪಿಮುಷ್ಟಿಯಲ್ಲಿದ್ದ ಬ್ಯಾಂಕುಗಳ ರಾಷ್ಟ್ರೀಕರಣ, ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಹಸಿರು ಕ್ರಾಂತಿಗೆ ಉತ್ತೇಜನ ನೀಡಿದ ಧೀಮಂತ ನಾಯಕಿ ದಿ. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಕನಸು ನನಸಾಗಿಸಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ನಿಷ್ಠೆಯಿಂದ ಕೆಲಸ ಮಾಡಬೇಕೆಂದು ರಾಜ್ಯ ಗೃಹ ಸಚಿವ ಕೆ.ಜೆ.ಜಾಜಜ್ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂದಿರಾಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ಅನುಷ್ಠಾನಕ್ಕೆ ತಂದ ಅನೇಕ ಜನಪರ ಕಾರ್ಯಕ್ರಮಗಳಿಂದಾಗಿ ದೇಶದ ಜನತೆ ಇಂದಿಗೂ ಇಂದಿರಾಗಾಂಧಿಯನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತಿದ್ದಾರೆಂದರು.
ದಕ್ಷ ಆಡಳಿತ ನೀಡಿರುವ ಇಂದಿರಾಗಾಂಧಿಯವನ್ನು ಅಟಲ್ ಬಿಹಾರಿ ಪಾಜಪೇಯಿ ಅವರಂತಹ ಮುತ್ಸದ್ಧಿ ರಾಜಕಾರಣಿಯೂ ಪ್ರಶಂಸಿದ್ದರಲ್ಲದೆ ದುರ್ಗಾ ದೇವಿ ಎಂದು ಬಣ್ಣಿಸಿದ್ದರೆಂದು ನೆನಪು ಮಾಡಿಕೊಂಡ ಸಚಿವ ಜಾರ್ಜ್, ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಇಂದಿರಾ ನೀಡಿರುವ ಕೊಡುಗೆ ಅಪಾರ. ಕಾಂಗ್ರೆಸ್ ಪಕ್ಷವಿದ್ದರೆ ನಾವು ಇರುತ್ತೇವೆ. ಪಕ್ಷದ ಕಾರ್ಯಕರ್ತರು ನಮ್ಮ ಹಿರಿಯ ನಾಯಕರ ತ್ಯಾಗ ಬಲಿದಾನವನ್ನು ಅರ್ಥ ಮಾಡಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದರು.
ಕಾಂಗ್ರೆಸ್ ಗೆಲ್ಲಿಸಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಸಹಕಾರ ನೀಡಿ, ಜಾತ್ಯತೀತ ತತ್ವಗಳಡಿ ಸ್ಥಾಪಿತವಾಗಿರುವ ಕಾಂಗ್ರೆಸ್ ಉಳಿದರೆ ಮಾತ್ರ ದೇಶದಲ್ಲಿ ಎಲ್ಲ ವರ್ಗದ ಜನತೆಯ ರಕ್ಷಣೆ ಸಾಧ್ಯವಾಗುತ್ತದೆ, ಸೌಹಾರ್ದತೆಯಿಂದ ಪ್ರತಿಯೊಬ್ಬರು ಬಾಳುವಂತಾಗುತ್ತದೆ ಎಂದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಕಾಂಗ್ರೆಸ್ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಈಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿರೋಧ ಪಕ್ಷದವರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಡಾ.ಸಿಂಗ್ ಅವರಂತಹ ಪ್ರಧಾನಿ ಸಿಗುವುದು ಅಪರೂಪವೆಂದು ಬಣ್ಣಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಹ ಜನಪರವಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರದ ಆಡಳಿತ ಮತ್ತು ಸಿದ್ದರಾಮಯ್ಯನವರ ಏಳಿಗೆ ಸಹಿಸದೆ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವೆ ಯಾವುದೇ ಒಡಕು, ಭಿನ್ನಮತವಿಲ್ಲದಿದ್ದರೂ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಒಂದು ವೇಳೆ ಯಾರಾದರೂ ತಪ್ಪು ಮಾಡುತ್ತಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಕ್ರಮ ಕೈಗೊಳ್ಳುವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಶಾಸಕ ಎಸ್.ಎನ್. ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಕೋಲಾರ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಜಿ.ಪಂ. ಸದಸ್ಯರಾದ ಅ.ಮು.ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಮಾಜಿ ಜಿ.ಪಂ ಸದಸ್ಯ ಗೋಪಾಲಕೃಷ್ಣ, ಮುಖಂಡರಾದ ಭಾರತಿ, ಅತ್ತಾವುಲ್ಲಾ ಖಾನ್, ಕುಮಾರ್, ಜಯದೇವ, ಮಂಜುನಾಥ್, ರಾಜೇಶ್ ಸಿಂಗ್, ಸಂಜಯ್ ಯಾದವ್, ಎಪಿಎಂಸಿ ಸದಸ್ಯ ಹೊಳಲಿ ಪ್ರಕಾಶ್ ಇನ್ನಿತರರು ಇದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಸ್ವಾಗತಿಸಿ, ವೆಂಕಟಪತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement