ಕಾಣೆಯಾದ ಬಾಲಕ ಶವವಾಗಿ ಪತ್ತೆ
ಚಿಂತಾಮಣಿ: ಕಾಣೆಯಾಗಿದ್ದ ಬಾಲಕನೊಬ್ಬ ಕುಂಟೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಉಪ್ಪರಪೇಟೆ ಗ್ರಾಮದಲ್ಲಿ ಗುರುವಾರ ಬೆಳಕಿಗೆ ಬಂದಿದೆ. ತಾಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮದ ಮೌಲಾ(6) ಎಂಬ ಯುಕೆಜಿ ವಿದ್ಯಾರ್ಥಿ ಕಳೆದ 5 ದಿನಗಳ ಹಿಂದೆ ಅಂಬಾಜಿ ನ್ಯೂ ಮಾರ್ಡನ್ ಶಾಲೆಗೆ ಹೋದವನುನಾಪತ್ತೆಯಾಗಿದ್ದ. ಪೋಷಕರು ಗಾಭರಿಯಿಂದ ಬಾಲಕನ ಹುಡುಕಾಟ ನಡೆಸಿ ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದರು.
ಗುರುವಾರ ಬೆಳಿಗ್ಗೆ ಗ್ರಾಮದ ಶಾಲೆ ಮುಂಭಾಗದಲ್ಲಿರುವ ಕುಂಟೆಯಲ್ಲಿ ಮೌಲಾ ಮೃತದೇಹ ಕಾಣಿಸಿಕೊಂಡಿರುವುದನ್ನು ಗ್ರಾಮಸ್ಥರು ನೋಡಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರ ಆರೋಪ: ಉಪ್ಪರಪೇಟೆ ಗ್ರಾಮದ ಸರ್ಕಾರಿ ಕಿರಿಯ ಉರ್ದು ಶಾಲೆ ಹಾಗೂ ಅಂಬಾಜಿ ನ್ಯೂ ಮಾರ್ಡನ್ ಶಾಲೆ ಹತ್ತಿರ ಕಾಂಪೌಂಡ್ ನಿರ್ಮಿಸದ ಕಾರಣ ದುರಂತ ಸಂಭವಿಸಿದೆ ಎಂದು ಜಿಲ್ಲಾ ಮಕ್ಕಳ ಹಕ್ಕು ಸಂಯೋಜಕ ತೌಫೀಕ್ ಅಹಮದ್ ಆರೋಪಿಸಿದ್ದಾರೆ.
ಶಾಲೆಯ ಬಳಿ ಇರುವ ಕುಂಟೆಯನ್ನು ಮುಚ್ಚಿಸದೆ ನಿರ್ಲಕ್ಷಿಸಿರುವ ಸ್ಥಳೀಯ ಗ್ರಾಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗ್ರಾಮಸ್ಥರು ಖಂಡಿಸಿದ್ದಾರೆ.
ಇನ್ನು ಮುಂದಾದರೂ ಶಾಲಾ ಮಕ್ಕಳ ಪ್ರಾಣಗಳ ಜೊತೆ ಚೆಲ್ಲಾಟವಾಡದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.