ಕ್ರೈಸ್ತನಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ ಜಾರ್ಜ್ ಪ್ರತಿಪಾದನೆ
ಕ.ಪ್ರ.ವಾರ್ತೆ ಕೋಲಾರ ಅ.31
ಪ್ರತಿಯೊಬ್ಬರು ಅವರವರ ಧರ್ಮಗಳನ್ನು ಗೌರವಿಸುವುದರಲ್ಲಿ ತೆಪ್ಪೇನು ಇಲ್ಲ. ಆದರೆ, ನಮ್ಮ ಧರ್ಮವೇ ಶ್ರೇಷ್ಠವೆಂದು ಅನ್ಯ ಧರ್ಮಗಳನ್ನು ದ್ವೇಷಿಸಬಾರದೆಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಅವರು ಗುರುವಾರ ನಗರದ ಮೆಥೋಡಿಸ್ಟ್ ಚರ್ಚಿನಲ್ಲಿ ಕ್ರೈಸ್ತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ಕ್ರೈಸ್ತ ಧರ್ಮಗುರುಗಳು ಬೇರೆ ಧರ್ಮಗಳಿಗೆ ಗೌರವ ನೀಡುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಸೌಹಾರ್ದತೆಯಿಂದ ಪ್ರತಿಯೊಬ್ಬರು ಬಾಳುವುದನ್ನು ಕಲಿಸಬೇಕೆಂದರು.
ಸೇವೆ ಮತ್ತು ತ್ಯಾಗದ ಸಂಕೇತವಾಗಿರುವ ಕ್ರೈಸ್ತ ಧರ್ಮದಲ್ಲಿ ನಾನು ಹುಟ್ಟಿರುವುದಕ್ಕೆ ಹಮ್ಮೆ ಪಡುತ್ತೇನೆ. ಜೊತೆಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆಂದು ತಿಳಿಸಿದರು.
ಕ್ರೈಸ್ತ ಸಮುದಾಯಕ್ಕೆ ಆರ್ಥಿಕ ಸಹಾಯ ಕಲ್ಪಿಸಬೇಕು ಮತ್ತು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಕೊಡಿಸಿಕೊಡಿ ಎಂದು ಮೆಥೋಡಿಸ್ಟ್ ಚರ್ಚಿನ ರೆ. ಕ್ರಿಸ್ಟೋಫರ್ ಮನವಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿದ ಸಚಿವರು, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರೊಂದಿಗೆ ಚರ್ಚಿಸಿ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರಲ್ಲದೆ ರಾಜ್ಯದ ಸರ್ಕಾರ ಕ್ರೈಸ್ತರಿಗಾಗಿ ಬಜೆಟ್ನಲ್ಲಿ ಮೀಸಲಿಟ್ಟರುವ ಅನುದಾನದಿಂದಲೂ ಹಣ ಕೊಡಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ನಲ್ಲಿ ಮಾತ್ರ ಎಲ್ಲಾ ಜಾತಿ, ಧರ್ಮಗಳ ಜನ ಇದ್ದಾರೆ. ಎಲ್ಲಾ ವರ್ಗದ ಜನರ ಹಿತ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಸಹ ಎಲ್ಲಾ ಸಮುದಾಯಗಳನ್ನು ಸಂಘಟಿಸಿ ಆರು ಕೋಟಿ ಜನತೆಯ ರಕ್ಷಣೆಗೆ ಮುಂದಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ಬಾಬು, ಕುಮಾರ್, ಜಯದೇವ, ಕ್ರೈಸ್ತ ಮುಖಂಡರಾದ ಫಾದರ್ ಮೈಶಾಕ್, ಸುನೀಲ್, ಮರಿಯಣ್ಣ, ಸತ್ಯರಾಜು, ಜಯಪಾಲ್, ಜಯದೇವ ಪ್ರಸನ್ನ, ಪ್ರಮೋದ್ ಇನ್ನಿತರರು ಇದ್ದರು.