ಸಿಬ್ಬಂದಿ ಕೊರತೆ, ಹೊಸ ಠಾಣೆ ಇಲ್ಲ
ಕನ್ನಡಪ್ರಭ ವಾರ್ತೆ, ಕೋಲಾರ, ಅ.31
ಕೋಲಾರ ಸೇರಿದಂತೆ ರಾಜ್ಯದೆಲ್ಲಡೆ 50 ಕಡೆ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಬಂದಿದ್ದು ಈ ಪೈಕಿ 25 ಕಡೆ ಠಾಣೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಠಾಣೆಗಳನ್ನು ಪ್ರಾರಂಭಿಸುವುದು ಕಷ್ಟದ ಕೆಲಸವೇನಲ್ಲ. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಬೇಡಿಕೆ ಈಡೇರಿಸಲು ವಿಳಂಬವಾಗುತ್ತಿದೆ ಎಂದು ಒಪ್ಪಿಕೊಂಡರು. ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ 16 ಸಾವಿರ ಹುದ್ದೆಗಳು ಖಾಲಿ ಇವೆ. ಈ ಪೈಕಿ ನಮ್ಮ ಸರ್ಕಾರ 8500 ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು ಇದಕ್ಕೆ ಮುಖ್ಯಮಂತ್ರಿಗಳಿಂದ ಅನುಮೋದನೆಯೂ ಸಿಕ್ಕಿದೆ. ಇದರಲ್ಲಿ 700 ಪೊಲೀಸ್ ಸಬ್ ಇನ್ಸೆಪೆಕ್ಟರ್ ಹುದ್ದೆಗಳು ಸೇರಿಕೊಂಡಿವೆ ಎಂದರು.
ಕಳೆದ ಐದಾರು ವರ್ಷಗಳಿಂದ ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ಸಿಬ್ಬಂದಿಯ ನೇಮಕಾತಿ ಆಗಿರಲಿಲ್ಲ. ಈ ಹಿಂದಿನ ಸರ್ಕಾರಗಳು ಕಾಲ ಕಾಲಕ್ಕೆ ನೇಮಕಾತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದಲ್ಲಿ ಸಿಬ್ಬಂದಿ ಕೊರತೆ ನಿವಾರಣೆ ಹಾಗೂ ಹೊಸ ಠಾಣೆಗಳ ಸ್ಥಾಪನೆಗೆ ಸಹಾಯವಾಗುತ್ತಿತ್ತು ಎಂದು ಉತ್ತರಿಸಿದರು. ಪ್ರತಿವರ್ಷ ಪೊಲೀಸ್ ಇಲಾಖೆಗೆ ಸಿಬ್ಬಂದಿ ನೇಮಕವಾಗಬೇಕು. ಹೊಸದಾಗಿ ಆಯ್ಕೆಯಾದ ಪೊಲೀಸರಿಗೆ ತರಬೇತಿ ನೀಡಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ. ನಮ್ಮ ಸರ್ಕಾರ ಬಂದ ಮೇಲೆ ನೇಮಕಾತಿಗೆ ಕ್ರಮ ಜರುಗಿಸಿರುವುದಾಗಿ ಹೇಳಿದರು.
11 ಸಾವಿರ ಮನೆಗಳ ನಿರ್ಮಾಣ: ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ 11 ಸಾವಿರ ಮನೆಗಳಿಗೆ ಬಜೆಟ್ನಲ್ಲಿ ಹಣ ಒದಗಿಸಿದ್ದು ಇನ್ನೊಂದು ತಿಂಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಹಾಲಿ ಹಳೆ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವ ಪೊಲೀಸರ ಸಮಸ್ಯೆ ಅರಿತು ಶಿಥಲಗೊಂಡಿರುವ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಪರಿಶೀಲನೆ ಮಾಡಿಸಿ ವರದಿ ಬಂದ ನಂತರ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆಯನ್ನು ಸರ್ಕಾರ ನೇರವಾಗಿ ಮಾಡುತ್ತಿಲ್ಲ. ಇದಕ್ಕಾಗಿಯೇ ರಚಿಸಿರುವ ಪೊಲೀಸ್ ವರ್ಗಾವಣೆ ಸಮಿತಿಯ ಸಲಹೆ ಮತ್ತು ಶಿಫಾರಸ್ಸುಗಳನ್ನು ಪರಿಗಣಿಸಿ ವರ್ಗಾವಣೆ ಮಾಡಲಾಗಿದ್ದು ಯಾವುದೇ ಗೊಂದಲವಿಲ್ಲದೆ ಈ ಬಾರಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗಳು ನಡೆದಿರುವುದಾಗಿ ತೃಪ್ತಿ ವ್ಯಕ್ತಪಡಿಸಿದರು.
ಪೊಲೀಸರಿಗೆ ರಜೆ ದಿನದ ಬತ್ಯೆ ಹೆಚ್ಚಿಸಲಾಗಿದೆ. ಪೊಲೀಸ್ ಶಾಲೆ, ಆಸ್ಪತ್ರೆಗಳಿಗೆ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ ಎಂದ ಸಚಿವರು,ದಕ್ಷತೆಯಿಂದ ಮತ್ತು ಕಾನೂನು ಪ್ರಕಾರ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸರ್ಕಾರ ಸದಾ ಬೆಂಬಲ ಹಾಗೂ ರಕ್ಷಣೆ ನೀಡುತ್ತದೆ. ಒಂದು ವೇಳೆ ಯಾರಾದರೂ ಕರ್ತವ್ಯ ಪಾಲಿಸದಿದ್ದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ನುಡಿದರು.
ಉಜಿರೆ ಪ್ರಕರಣವನ್ನು ಸಿಒಡಿಗೆ ವಹಿಸಿದ್ದು ಇದರಲ್ಲಿ ನನ್ನ ಹಸ್ತಕ್ಷೇಪ ಯಾವುದು ಇಲ್ಲ, ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ನನ್ನ ಮೇಲೆ ಒತ್ತಡ ತರಲು ಯಾರಿಗೂ ಸಾಧ್ಯವಿಲ್ಲ, ವಿರೇಂದ್ರ ಪಾಟೀಲಲ್ಮತ್ತು ಬಂಗಾರಪ್ಪ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿರುವ ನಾನು ನಾಯಕರು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಈಗಲೂ ಅದೇ ರೀತಿ ಕೆಲಸ ಮಾಡುತ್ತಿದ್ದು ಯಾವುದೇ ಆಸೆ,ಆಕಾಂಕ್ಷೆ ಇಲ್ಲದೆ ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿರುವುದರಿಂದ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲವೆಂದರು.
ಇದೇ ಸಂದರ್ಭದಲ್ಲಿ ಅವರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರಂಭಿಸಿರುವ ಸಬಲ ಮತ್ತು ಪೊಲೀಸ್ ಸಹಾಯವಾಣಿಯನ್ನು ಲೋಕಾರ್ಪಣೆ ಮಾಡಿದರಲ್ಲದೆ ಕೋಲಾರ ಮತ್ತು ಕೆಜಿಎಫ್ ಪೊಲೀಸ್ ಇಲಾಖೆಯಿಂದ ಹೊರ ತಂದಿರುವ ಅಪರಾಧ ತಡೆಗೆ ಸಂಬಂಧಿಸಿದ ಕೈಪಿಡಿ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ವಲಯ ಐಜಿಪಿ ಅಮರ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಡಿ.ಕೆ. ರವಿ, ಕೋಲಾರ ಎಸ್ಪಿ ಡಾ.ರಾಮ್ನಿವಾಸ್ ಸಪಟ್, ಕೆಜಿಎಫ್ ಎಸ್ಪಿ ಡಾ. ರೋಹಿಣಿಕಟೋಚ್ ಸಪೆಟ್, ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಇದ್ದರು.