ಸಿಲಿಂಡರ್ ಸ್ಫೋಟ; ಮನೆ ಭಸ್ಮ
ಟೇಕಲ್: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಸುಟ್ಟು ಭಸ್ಮವಾಗಿ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಾಸ್ತಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಅವಘಡದಲ್ಲಿ ಪಾರಾಗಿರುವ ಮಹಿಳೆಯನ್ನು ಬೇಬಿ ಎಂದು ಗುರ್ತಿಸಲಾಗಿದೆ.
ಮಾಸ್ತಿ ಗ್ರಾಮದ ದಿನ್ನಹಳ್ಳಿ ರಸ್ತೆಯ ಬೇಬಿ ಎಂಬವರ ಮನೆಯಲ್ಲಿ ಬುಧವಾರ ಅಡುಗೆ ಮಾಡಲು ಸ್ಟೌವ್ ಹೊತ್ತಿಸಿ ಮನೆಯಿಂದ ಹೊರ ಬಂದ ನಂತರ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ತಕ್ಷಣ ಸುತ್ತ ಮುತ್ತಲಿನವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಮನೆಯಲ್ಲಿದ್ದ 200 ಗ್ರಾಂ ಚಿನ್ನ, ಧಾನ್ಯಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟು ಸುಮಾರು 4 ಲಕ್ಷ ನಷ್ಟವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಈ ಬಗ್ಗೆ ಬೇಬಿ ಎಂಬವರ ಮಗ ವಿನೋದ್ ಕುಮಾರ್ ಮಾಸ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.