ಕಾರು ಡಿಕ್ಕಿ-ಇಬ್ಬರು ಸಾವು
ಕೋಲಾರ: ರಸ್ತೆ ದಾಟುತ್ತಿದ್ದ ಮೂವರು ವ್ಯಕ್ತಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಇನ್ನೊಬ್ಬರು ಗಾಯಗೊಂಡಿರುವ ಘಟನೆ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಂಡರಾಜನಹಳ್ಳಿ ದರ್ಗಾ ಬಳಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಿಂತಮಾಕನಪಲ್ಲಿ ಗ್ರಾಮದ ದ್ವಾರಕನಾಥ್ ಮತ್ತು ದೇವಕೃಷ್ಣ ಎಂದು ಗುರುತಿಸಲಾಗಿದ್ದು, ಗಾಯಾಳು ಪುಟ್ಟರಾಜು ಎಂಬುವರನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಈ ನತದೃಷ್ಟರು ವರ್ತೂರ್ ಸಂತೆಗೆ ಹೋಗಿ ಟಾಟಾ ಎಸ್ ವಾಹನದಲ್ಲಿ ತಮ್ಮ ಊರಿಗೆ ವಾಪಸಾಗುವಾಗ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನ್ಯೂ ತಾಜ್ ಹೊಟೇಲ್ಗೆ ಊಟ ಮಾಡಲೆಂದು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರಸ್ತೆ ದಾಡುತ್ತಿದ್ದಾಗ, ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರುಕತೆಯಿಂದ ಈ ಅಪಘಾತ ನಡೆದಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.