ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ; ಮನವಿ
ಚಿಂತಾಮಣಿ: ಪಟ್ಟಣದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೂಲ ಸೌಲಭ್ಯಗಳ ಕೊರತೆ ಹಾಗೂ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿ ಎಬಿವಿಪಿ ಸಂಘಟನೆ ವತಿಯಿಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಸ್ತುತ ಕಾಲೇಜು 1500 ವಿದ್ಯಾರ್ಥಿಗಳನ್ನು ಹೊಂದಿದ್ದು, ಇಂಗ್ಲಿಷ್ ಉಪನ್ಯಾಸಕರಿಲ್ಲ ಹಾಗೂ ಶೌಚಾಲಯ, ಒಳಚರಂಡಿ ಸಮಸ್ಯೆಗಳು ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ನೂರಾರು ವಿದ್ಯಾರ್ಥಿಗಳು ವಿವರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಎಂ. ಕೃಷ್ಣಾರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಶೀಘ್ರವೇ ಸಂಬಂಧಪಟ್ಟ ಸಚಿವರ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅಕ್ರಮ ಗುಡಿಸಲು ತೆರವು
ಮುಳಬಾಗಲು: ನೂಗಲಬಂಡೆ ಪ್ರದೇಶದಲ್ಲಿ ಅಕ್ರಮ ಗುಡಿಸಲು ತೆರವಿಗೆ ಮುಂದಾದುದನ್ನು ತಡೆದು ಸೋಮವಾರ ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಬೆಂಕಿ ಹಾಕಿದರು. ಕಳೆದ ವಾರ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮನವೊಲಿಸಿ ಗುಡಿಸಲು ಹಾಕುವುದನ್ನು ತಡೆದು ನಿವೇಶನ ಮಂಜೂರು ಮಾಡಿಸಿಕೊಂಡ ನಂತರ ಗುಡಿಸಲು ಹಾಕಿ ಕೊಳ್ಳಲು ಸೂಚಿಸಿ ಸ್ಥಳವನ್ನು ತೆರವುಗೊಳಿಸಿದ್ದರು.