ಚುನಾವಣಾಧಿಕಾರಿಗೆ ಶಿಕ್ಷಕರ ಮುತ್ತಿಗೆ
ಕ.ಪ್ರ.ವಾರ್ತೆ ಚಿಂತಾಮಣಿ ಸೆ. 2
ಮತದಾರರ ಗುರುತಿನ ಚೀಟಿ ಸರಿಯಾಗಿ ವಿತರಿಸಿಲ್ಲವೆಂದು ಆರೋಪಿಸಿ ಚುನಾವಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಒಂದು ಪಕ್ಷದ ಗುಂಪು ಹಲ್ಲೆ ಮಾಡಲು ಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಾಂಡ್ಲಹಳ್ಳಿಯಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. 2013-14ರಿಂದ 2017-18ನೇ ಸಾಲುಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆಯನ್ನು ಭಾನುವಾರ ಮೈಲಾಂಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಿತು.
ಚುನಾವಣೆ ಅಧಿಕಾರಿ ಎಂ.ಡಿ. ವೆಂಕಟೇಶಮೂರ್ತಿ ಎಂಬುವರು ಒಂದು ಪಕ್ಷದ ಗುಂಪಿನ ಮತದಾರರಿಗೆ ಸರಿಯಾಗಿ ಗುರುತಿನ ಚೀಟಿ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಹಲವರು ಅಧಿಕಾರಿಗಳ ಮೇಲೆ ಕೈ ಮಿಲಾಯಿಸಲು ಯತ್ನಿಸಿದಾಗ, ಕೂಡಲೇ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಅಧಿಕಾರಿಗಳ ವಿರುದ್ಧ ಮುತ್ತಿಗೆ ಹಾಕಿದ ಶಿಕ್ಷಕರು: ಮತದಾನ ನಡೆಯಲು ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ಭಾನುವಾರ ರಾತ್ರಿ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುವಾಗ ಗೌರವ ಧನ ನೀಡದೇ ಪರದಾಡಿಸಿ ಮತ್ತು ಕಿರಿ ಕಿರಿ ಉಂಟುಮಾಡಿದ ಚುನಾವಣಾಧಿಕಾರಿ ಎಂ.ಡಿ. ವೆಂಕಟೇಶಮೂರ್ತಿ ಮತ್ತು ಹಾರಿಫ್ ಉಲ್ಲಾ ಅವರಿಗೆ ಹಲವಾರು ಶಿಕ್ಷಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಚುನಾವಣಾ ಅಧಿಕಾರಿಗಳನ್ನಾಗಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ 49 ಶಿಕ್ಷಕರಿಗೆ ಸಹಕಾರ ಕ್ಷೇತ್ರದ ಚುನಾವಣಾಧಿಕಾರಿಗಳು ಬೆಳಗಿನ ತಿಂಡಿ ಕಾಫಿ ಮತ್ತು ಕುಡಿಯುವ ನೀರು ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿಲ್ಲವೆಂದು ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರನ್ನು ಸಮಾಧಾನಪಡಿಸಿದ ಚುನಾವಣಾಧಿಕಾರಿಗಳು ಸಣ್ಣ ಪುಟ್ಟ ಕೆಲಸಗಳಿಂದ ತಮ್ಮ ಸಮಸ್ಯೆಗೆ ಸ್ಪಂದಿಸದೆ ಇರುವುದಕ್ಕೆ ವಿಷಾದಿಸುತ್ತಾ, ನಂತರ ಗೌರವ ಧನವನ್ನು ನೀಡಿದರು. ಇದರಿಂದ ಶಿಕ್ಷಕರು ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿದರು.