ದೇಗುಲ ಹುಂಡಿ ಬೀಗ ಮುರಿದು ಕಳವು
ಕೆಜಿಎಫ್: ಇಲ್ಲಿನ ಗುಟ್ಟಹಳ್ಳಿ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿಯ ಬೀಗ ಮುರಿದು ಕಳವು ಮಾಡಲು ಯತ್ನಿಸುತ್ತಿದ್ದ ಕಳ್ಳರು ಡಿಎಆರ್ ಪೊಲೀಸ್ ಸಿಬ್ಬಂದಿ ಕಂಡು ಪರಾರಿಯಾಗಿರುವ ಘಟನೆ ಬೇತಮಂಗಲ ಹೋಬಳಿಯಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಗುಟ್ಟಹಳ್ಳಿ ಗ್ರಾಮದ ಸುಪ್ರಸಿದ್ದ ಬಂಗಾರು ತಿರುಪತಿ ದೇವಸ್ಥಾನದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ 9.30ರ ಸಮಯದಲ್ಲಿ ಕಳ್ಳರು ಹುಂಡಿಯ ಬೀಗ ಮುರಿದು ಅದರಲ್ಲಿದ್ದ ಹಣವನ್ನು ಕಳವು ಮಾಡುತ್ತಿದ್ದಾಗ ಡಿಎಆರ್ ಪೊಲೀಸ್ ಸಿಬ್ಬಂದಿ ಕಂಡು ಕೈಗೆ ಸಿಕ್ಕ ಅಂದಾಜು 20 ಸಾವಿರ ಹಣವನ್ನು ದೋಚಿಕೊಂಡು ಹೋಗಿದ್ದು, ದೇವಸ್ಥಾನದ ಎಡ ಭಾಗದಲ್ಲಿ ಸ್ವಲ್ಪ ಹಣ ಮತ್ತು ಬೀಗ ಸಿಕ್ಕಿರುವುದಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮರಿರಾಜು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಕೋರಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶ್ರಾವಣ ಶನಿವಾರ ಕಡೆ ದಿನವಾದ ಶನಿವಾರದಂದು ಗುಟ್ಟಹಳ್ಳಿ ಗ್ರಾಮದ ಬಂಗಾರು ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಕೆಜಿಎಫ್ ಕ್ಷೇತರ ಸೇರಿದಂತೆ ಕರ್ನಾಟಕ ರಾಜ್ಯ ಹಾಗೂ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ದೇವಸ್ಥಾನ ದರ್ಶನಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಕಾಣಿಕೆಯಾಗಿ ಸಾವಿರಾರು ಹಣ ದೇವಸ್ಥಾನದ ಹುಂಡಿಯಲ್ಲಿ ಅರ್ಪಿಸಿದ್ದರು.
ಕ್ರೀಡಾಂಗಣ ಕಾಮಗಾರಿ ಮುಗಿಸಲು ಆದೇಶ
ಬಾಗೇಪಲ್ಲಿ: ನಿಗದಿತ ಕಾಲಮಿತಿಯಲ್ಲಿ ಕ್ರೀಡಾಂಗಣದ ಕಾಮಗಾರಿ ಮುಗಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆದೇಶ ನೀಡಿದರು. ನಗರದ ನೂತನ ತಾಲೂಕು ಕ್ರೀಡಾಂಗಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ, ಪಂಚಾಯತ್ ಯುವ ಔರ್ ಖೇಲ್ ಅಭಿಯಾನ್ (ಪೈಕಾ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಪಂ, ತಾಪಂ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೈಕಾ (ಗ್ರಾಮಾಂತರ) ಕ್ರೀಡಾಕೂಟವನ್ನು ಉದ್ಟಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಕ್ರಿಕೆಟ್ ಬಿಟ್ಟರೆ ಉಳಿದ ಯಾವುದೇ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಇತ್ತೀಚೆಗೆ ಕ್ರಿಕೆಟ್ನಲ್ಲಿ ರಾಜಕೀಯ ತುಂಬಿ ತುಳುಕುತ್ತಿದೆ. ಕ್ರೀಡೆಯಲ್ಲಿ ಮುಂದೆ ಇರುವ ದೇಶ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಹೊಂದುತ್ತದೆ.
ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆಯಿದೆ ಎಂದರು. 25 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ ಅವರು, ಕ್ರೀಡಾಂಗಣಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು. ಜಿಪಂ ಸದಸ್ಯೆ ಬಿ.ಸಾವಿತ್ರಮ್ಮ ಮುನಿಶಾಮಿ, ತಹಸೀಲ್ದಾರ್ ಎಂ.ಎ. ಪದ್ಮ, ಜಿಪಂ ಮಾಜಿ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ್, ಲೋಕೋಪಯೋಗಿ ಇಲಾಖೆ ಎಇಇ ಜೆ.ಕೆ.ಕೃಷ್ಣಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎನ್.ನಟರಾಜ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಮುಸ್ತಾಕ್ ಆಹಮದ್, ಕೆ.ಟಿ.ವೀರಾಂಜನೇಯಲು, ಕರವೇ ಚಂದ್ರಶೇಖರ್, ಬೂರಗಮಡುಗು ನರಸಿಂಹಪ್ಪ ಇದ್ದರು.