ಆಲಿಕಲ್ಲು ಮಳೆ; ಬೆಳೆಗಳಿಗೆ ಹಾನಿ
ಟೇಕಲ್: ಬಿರುಗಾಳಿ ಸಹಿತ ಆಲಿಕಲ್ಲಿನ ಮಳೆಯಿಂದ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, 16 ಲಕ್ಷಕ್ಕೂ ಹೆಚ್ಚು ನಷ್ಟವಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಟೇಕಲ್ನ ಹುಣಸಿಕೋಟೆಯ ರೈತ ಶ್ರೀನಿವಾಸ್ ಅವರ 2-00 ಎಕರೆ ಪಪ್ಪಾಯಿ ಗಿಡ, 1-00 ಎಕರೆ ಚೆಂಡು ಹೂವು ಹಾಗೂ ಮಾದಾಪುರದ ಶ್ರೀನಿವಾಸ್ ಅವರ ಒಂದೂವರೆ ಎಕರೆ ಹುರುಳಿಕಾಯಿ(ಬೀನ್ಸ್), ಕೂಗಿಟಗಾನಹಳ್ಳಿ, ಚಿನಪಗಾನಹಳ್ಳಿ ಹಾಗೂ ಸುತ್ತಮುತ್ತಲ ರೈತರ ಸುಮಾರು ಎಕರೆಗಳ ಟೊಮೊಟೋ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಮಾದಾಪುರದ ಶ್ರೀನಿವಾಸ್ ಅವರ ಬೀನ್ಸ್ ನೋಡಿದರೆ ಸುಮಾರು 8 ಅಡಿ ಮೇಲ್ಮುಖವಾಗಿ ಕಟ್ಟಿದ್ದು, ಆಲಿಕಲ್ಲು ಬಿದ್ದ ನಂತರ ಎಲ್ಲವೂ ಮಣ್ಣುಪಾಲಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪರಶಿವಮೂರ್ತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಸಿ. ಆನಂದ್ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಟೇಕಲ್ ಕೃಷಿ ಅಧಿಕಾರಿ ಎನ್. ಪ್ರಕಾಶ್ಬಾಬು ಇದ್ದರು.