ಕೆಜಿಎಫ್ನಲ್ಲಿ ಹೆಚ್ಚುತ್ತಿರುವ ಕಳ್ಳತನ
ಆರ್. ರಜನೀಕಾಂತ್
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮನೆಗಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಈವೆರೆಗೆ ಯಾವೊಂದು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಪತ್ತೆ ಹಚ್ಚುವುದಾಗಲೀ ಅಥವಾ ಯಾವೊಬ್ಬ ಕಳ್ಳರನ್ನು ಬಂಧಿಸುವುದಾಗಲಿ ಮಾಡದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೀಡು ಮಾಡಿದೆ.
ನಿರ್ಲಕ್ಷ್ಯ: ರಾಬರ್ಟ್ಸನ್ಪೇಟೆ, ಆಂಡ್ರಸನ್ಪೇಟೆ, ಮಾರಿಕುಪ್ಪಂ, ಚಾಂಪಿಯನ್ರೀಫ್, ಉರಿಗಾಂ ಹಾಗೂ ಬೆಮೆಲ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳರು ನಿರಂತರವಾಗಿ ಬೀಗ ಹಾಕಿರುವ ಮನೆಗಳನ್ನು ಪತ್ತೆ ಹಚ್ಚಿ ಮನೆಗೆ ಹಾಕಿರುವ ಬೀಗ ಮುರಿದು ಲಕ್ಷಾಂತರ ರು. ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣಗಳು, ನಗದು ಸೇರಿದಂತೆ ಇತರೆ ಮನೆಯಲ್ಲಿದ್ದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತಿಕೊಳ್ಳದ ಪೊಲೀಸ್ ಇಲಾಖೆ ಈವರೆಗೆ ಯಾವುದೇ ಮನೆಗಳ್ಳತನ ಪ್ರಕರಣ ಪತ್ತೆ ಹಚ್ಚಿ ಕಳ್ಳತನದಲ್ಲಿ ಭಾಗಿಯಾದ ಕಳ್ಳರನ್ನು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲದ ಕಾರಣ ಸಾರ್ವಜನಿಕರಲ್ಲಿ ಪೊಲೀಸರ ನಿರ್ಲಕ್ಷ್ಯ ಬಗ್ಗೆ ಆತಂಕ ಮನೆ ಮಾಡಿದೆ.
ಜಾಗೃತಿ ಅಗತ್ಯ: ಮನೆಗಳ ಕಳವು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಿ ಅತಿ ಶೀಘ್ರ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದರಾದರೂ ಯಾವುದೇ ಪ್ರಕರಣಗಳ ಪತ್ತೆ ಹಚ್ಚಿರುವ ಬಗ್ಗೆ ಮಾಹಿತಿ ಇಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಅಲ್ಲದೆ ಕೆಜಿಎಫ್ ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಾರ್ವಜನಿಕ ಸಭೆ, ಭಿತ್ತಿ ಪತ್ರ ಹಂಚುವ ಕೆಲಸವನ್ನು ಪೊಲೀಸ್ ಇಲಾಖೆ ವತಿಯಿಂದ ಮಾಡಬೇಕಿದೆ.
ಪೊಲೀಸರಿಗೆ ತಿಳಿಸಿ: ಕೆಜಿಎಫ್ನಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಮನೆ ಕಳ್ಳತನದ ಹಿನ್ನೆಲೆಯಲ್ಲಿ ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ಹೋಗುವವರು, ಮನೆಗಳಿಗೆ ಬೀಗ ಹಾಕಿಕೊಂಡು ಹೋಗುವಾಗ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಬೇಕು. ಮೊಬೈಲ್ಗೆ ಕರೆ ಮಾಡಿ ತಮ್ಮ ಮನೆಯ ಬಗ್ಗೆ ವಿಚಾರಿಸುವುದು, ಮನೆಯಲ್ಲಿ ಚಿನ್ನಾಭರಣಗಳು, ಬೆಳ್ಳಿ ಆಭರಣಗಳು, ನಗದು ಸೇರಿದಂತೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ನೆಂಟರ ಹಾಗೂ ಸ್ನೇಹಿತರ ಮನೆಯಲ್ಲಿಟ್ಟು ಹೋಗಿ ಅಥವಾ ಸ್ಥಳಿಯ ಬ್ಯಾಂಕ್ಗಳ ಲಾಕರ್ನಲ್ಲಿಡಬೇಕು. ಮನೆಗೆ ಬೀಗ ಹಾಕಿಕೊಂಡು ಹೋಗುವ ವಿಷಯವನ್ನು ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಬೇಕು.