ಕೋಲಾರ ಜಿಪಂ ಮಾಜಿ ಅಧ್ಯಕ್ಷ, ಪತ್ನಿ ಆಸ್ತಿ 1.57 ಕೋಟಿ!
ಬೆಂಗಳೂರು: ಕೋಲಾರ ಜಿಲ್ಲಾ ಪಂಚಾಯತಿ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿದ್ದ ಎಂ.ಶ್ರೀನಿವಾಸ್ ಹಾಗೂ ಅವರ ಪತ್ನಿ ಶ್ರೀನಿವಾಸಪುರ ತಾಲೂಕು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಎಸ್.ಚಂದ್ರಕಲಾ ಅವರು ಆದಾಯ ಮೀರಿ ಆಸ್ತಿ ಸಂಪಾದಿಸಿರುವುದು ಲೋಕಾಯುಕ್ತ ತನಿಖೆಯಿಂದ ದೃಢಪಟ್ಟಿದೆ.
ತನಿಖೆಯ ವೇಳೆ ಇಬ್ಬರು ತಮ್ಮ ಆದಾಯಕ್ಕಿಂತ ರು. 1.07 ಕೋಟಿಗೂ ಅಧಿಕ ಅಕ್ರಮ ಆಸ್ತಿ ಹೊಂದಿರುವುದು ಬಯಲಾಗಿದೆ. ಒಟ್ಟಾರೆ ಆಸ್ತಿಯ ಶೇ.68.25ರಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಮಂಗಳವಾರ ಲೋಕಾಯುಕ್ತ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಡಾ.ಎಸ್.ಚಂದ್ರಕಲಾ ಅವರ ಅಭಿಯೋಜನಾ ಮಂಜೂರಿಗೆ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದ್ದು, ಮಂಜೂರಾದ ಬಳಿಕ ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.
ಶ್ರೀನಿವಾಸಪುರ ಇಮರಕುಂಟೆ ಗ್ರಾಮದ ಮಾರುತಿರೆಡ್ಡಿ ಎಂಬುವವರು 2012ರ ಡಿಸೆಂಬರ್ 31ರಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಅಧಿಕಾರಿಗಳಿಗೆ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ತನಿಖೆ ಆರಂಭಿಸಿದ ಅಧಿಕಾರಿಗಳು 2013ರ ಜನವರಿ 23ರಂದು ಆಪಾದಿತರಿಗೆ ಸೇರಿದ ಕೋಲಾರ, ಶ್ರೀನಿವಾಸಪುರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ರು. 1.57 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿತ್ತು. ಮೊದಲನೇ ಆರೋಪಿ ಶ್ರೀನಿವಾಸ್ ಅವರಿಗೆ ಸರ್ಕಾರದಿಂದ 1 ಎಕರೆ 20 ಗುಂಟೆ ಮಾತ್ರ ಮಂಜೂರಾಗಿತ್ತು.
ಆದರೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಶ್ರೀನಿವಾಸಪುರ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರದಿಂದ 16 ಎಕರೆ 20 ಗುಂಟೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಮಂಜೂರು ಮಾಡಿಸಿಕೊಂಡಿದ್ದ ಭೂಮಿಯನ್ನು ಸರ್ಕಾರ ರದ್ದುಗೊಳಿಸಿದೆ. ಸರ್ಕಾರ ಭೂಮಿಯನ್ನು ರದ್ದುಗೊಳಿಸಿದ್ದರೂ ಸರ್ಕಾರದ ವಶಕ್ಕೆ ಬಿಟ್ಟುಕೊಡದೆ ತಮ್ಮ ವಶದಲ್ಲೇ ಇರಿಸಿಕೊಂಡಿದ್ದರು.
ಅಕ್ರಮ ಮಂಜೂರಿನಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತನಿಖೆ ಹಂತದಲ್ಲಿವೆ.
ಉಳಿದಂತೆ ಆರೋಪಿ ಶ್ರೀನಿವಾಸ್ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮನೆಯನ್ನು ಹೊಂದಿದ್ದು ಬಾಡಿಗೆಗೆ ನೀಡಿದ್ದಾರೆ.
ಶ್ರೀನಿವಾಸ್ ಎರಡು ಬಾರಿ ಶ್ರೀನಿವಾಸಪುರ ಪುರಸಭೆ ಸದಸ್ಯರಾಗಿದ್ದರು. ಬಳಿಕ ಕರ್ನಾಟಕ ಮುಕ್ತ ವಿಶ್ವಿವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತರುವಾಯ ಕೋಲಾರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದು ಮುಂದುವರೆದು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.
ಎರಡನೇ ಆರೋಪಿ ಡಾ.ಎಸ್.ಚಂದ್ರಕಲಾ ಅವರು ತನ್ನ ಸಕ್ಷಮ ಪ್ರಾಧಿಕಾರಕ್ಕೆ ತಾನು ಹಾಗೂ ತನ್ನ ಕುಟುಂಬದ ಸದಸ್ಯರು ಹೊಂದಿರುನ ನೈಜ ಆಸ್ತಿ ಘೋಷಿಸುವಾಗ ಉದ್ದೇಶಪೂರ್ವಕವಾಗಿ ಕೆಲವು ಆಸ್ತಿ ಮರೆ ಮಾಚಿ ಸುಳ್ಳು ಘೋಷಣೆಗಳನ್ನು ಮಾಡಿದ್ದಾರೆ ಎನ್ನುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಮೂಲಕ ಡಾ.ಚಂದ್ರಕಲಾ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1966ರ ನಿಯಮ 23(1) ಉಲ್ಲಂಘಿಸಿದ್ದಾರೆ.