'ಗಿಡ ನೆಟ್ಟರಷ್ಟೆ ಸಾಲದು ಬೆಳೆಸಬೇಕು'
ಚಿಕ್ಕಬಳ್ಳಾಪುರ: ದಿನೇ ದಿನೇ ವಿವಿಧ ರೀತಿಯಲ್ಲಾಗುತ್ತಿರುವ ಪರಿಸರ ನಾಶವು ಜೀವ ಸಂಕುಲಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರಣ್ಯ ರಕ್ಷಣಾಧಿಕಾರಿ ಮರಿಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು. ನಗರದ ಜೈಭೀಮ್ ವಸತಿ ನಿಲಯದಲ್ಲಿ ಜ್ಞಾನದೀಪ್ತಿ ಟ್ರಸ್ಟ್ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರ ರಕ್ಷಣೆ ಎಲ್ಲರ ಹೊಣೆ: ಪರಿಸರ ರಕ್ಷಿಸಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ನಾವು ಮರೆಯಬಾರದು. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲೇಬೇಕಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಇಂದು ಮರಗಿಡಗಳನ್ನು ಹೆಚ್ಚಾಗಿ ಕಡಿದು ಹಾಕುತ್ತಿರುವುದರಿಂದ ಮಳೆಯ ಕೊರತೆ, ಅಶುದ್ಧ ಗಾಳಿ, ಅಶುಭ್ರತೆ, ಪ್ರಮುಖವಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿರುವುದು ಸೇರಿದಂತೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದ ಅವರು, ಮನೆ, ಶಾಲೆ ಸುತ್ತಮುತ್ತಲಿನ ಆವರಣದಲ್ಲದೇ ಎಲ್ಲೆಡೆ ಗಿಡ ನೆಡಬೇಕು. ಮರಗಳನ್ನು ಬೆಳೆಸಬೇಕು. ಈ ಮೂಲಕ ಹಸಿರು ಸಂಪತ್ತು ವೃದ್ಧಿಯಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಕೇವಲ ಸಸಿಗಳನ್ನು ನೆಡುವುದರಿಂದ ಮಾತ್ರ ಜವಾಬ್ದಾರಿ ಮುಗಿಯುವುದಿಲ್ಲ. ಅದರ ರಕ್ಷಣೆ, ಪೋಷಣೆಯೂ ಅತಿ ಮುಖ್ಯವಾಗಿರುತ್ತದೆ. ನಾವು ಸಸಿಗಳನ್ನು ನಡೆವುದರಿಂದ ಲಾಭವಿದೆಯೇ ಹೊರತು ನಷ್ಟವೇನು ಆಗುವುದಿಲ್ಲ. ಗಿಡಮರಗಳು ನೆರಳು ನೀಡುವುದಲ್ಲದೇ ಪಶು, ಪಕ್ಷಿಗಳಿಗೂ ಸಹ ಆಸರೆ, ಆಶ್ರಯ ತಾಣವಾಗುತ್ತವೆ.ಅಲ್ಲದೇ ಪರಿಸರದಲ್ಲಿ ಸಮತೋಲನವನ್ನು ಕಾಪಾಡುತ್ತದೆ ಎಂದ ಅವರು, ಪ್ರತಿಯೊಬ್ಬ ಸ್ವಯಂ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ರಕ್ಷಿಸಬೇಕು. ಈ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸಬೇಕೆಂದರು.
ಜ್ಞಾನದೀಪ್ತಿ ಟ್ರಸ್ಟ್ ಮುಖ್ಯಸ್ಥೆ ವೇದಶ್ರೀ ಮಾತನಾಡಿ, ತಮ್ಮ ಟ್ರಸ್ಟ್ ಮೂಲಕ ಪರಿಸರ ರಕ್ಷಣೆ ಮಾಡುವ ಕಾರ್ಯಕ್ರಮ ಕೈಗೊಳ್ಳುತ್ತಿದ್ದು ಈ ಮೂಲಕ ಸಮಾಜಕ್ಕೆ ಸ್ವಲ್ಪವಾದರೂ ಸಹಾಯವಾದರೆ ಅದೇ ನಮಗೆ ಸಂತಸ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಂಪು ಮರದ ಆನಂದ್ ಮತ್ತಿತರರು ಉಪಸ್ಥಿತರಿದ್ದರು.