ಡೆಂಘೀ; ಗ್ರಾಮಕ್ಕೆ ಪೆದ್ದಪ್ಪಯ್ಯ ಭೇಟಿ
ಮುಳಬಾಗಲು: ಡೆಂಘೀ ಜ್ವರದ ಹಿನ್ನೆಲೆಯಲ್ಲಿ ತಾಲೂಕಿನ ಕೆಂಚನಹಳ್ಳಿ ಗ್ರಾಮಕ್ಕೆ ಮಂಗಳವಾರ ಉತ್ತನೂರು ಗ್ರಾಪಂ ಅಧ್ಯಕ್ಷ ಪೆದ್ದಪ್ಪಯ್ಯ ಭೇಟಿ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ರಮಾನಂದ್, ಉತ್ತನೂರು ಸರ್ಕಾರಿ ವೈದ್ಯಾಧಿಕಾರಿ ಡಾ. ಚನ್ನಕೇಶವ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಗೋಪಾಲ್ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಶಂಕಿತ ಡೆಂಘೀಯಿಂದ ಆಸ್ಪತ್ರೆಗೆ ದಾಖಲಾಗಿರುವ ಚಂದ್ರಶೇಖರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಸಂಪರ್ಕಿಸಿ, ಮಾಹಿತಿ ಪಡೆದರು.
ಕಾಲುವೆ ವಿವಾದ: ವಿಚಾರಣೆ ಮುಂದಕ್ಕೆ
ನವದೆಹಲಿ: ಪೆರಗೋಡು ಕಾಲುವೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದಗಳ ವಿಚಾರಣೆ ವೇಳೆಯೇ ಪೆರಗೋಡು ಕಾಲುವೆ ವಿವಾದದ ವಿಚಾರಣೆ ನಡೆಸುವುದಾಗಿ ನ್ಯಾ. ಆರ್.ಎಂ. ಲೋಧಾ ಮತ್ತು ನ್ಯಾ. ಮದನ್ ಬಿ.ಲೋಕೂರ್ ಅವರಿದ್ದ ದ್ವಿಸದಸ್ಯ ಪೀಠವು ತಿಳಿಸಿತು. ಚಿತ್ರಾವತಿ ನದಿಗೆ ಪೆರಗೋಡು ಬಳಿ ಅಣೆಕಟ್ಟು ಕಟ್ಟಲು ಕರ್ನಾಟಕ ಉದ್ದೇಶಿಸಿದೆ. ನದಿ ನೀರನ್ನು ಕುಡಿಯಲು ಬಳಸುವುದು ಕರ್ನಾಟಕದ ಉದ್ದೇಶ. ಆದರೆ, ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿದರೆ ತನ್ನ ಕೆರೆ ನೀರಾವರಿ ಯೋಜನೆಗೆ ನೀರಿನ ಕೊರತೆ ಆಗಲಿದೆ ಎಂದು ಆಂಧ್ರಪ್ರದೇಶವು ತಕರಾರು ತೆಗೆದು 2003ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ.
ನರ್ಸಿಂಗ್ ಕಾಲೇಜು ಸ್ಥಾಪನೆಗೆ ಒತ್ತಾಯ
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಅನೇಕ ಕಡೆ ಸರ್ಕಾರಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಬಜೆಟ್ನಲ್ಲಿ ಘೋಷಿಸಿದ್ದಾರೆ. ಆದರೆ ರಾಜ್ಯದಲ್ಲಿ ಅತಿ ಹಿಂದುಳಿದಿರುವ ಕೋಲಾರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ನರ್ಸಿಂಗ್ ಕಾಲೇಜು ಮಂಜೂರು ಮಾಡಬೇಕೆಂದು ಬಿಜೆಪಿ ನಗರ ಘಟಕದ ಮುಖಂಡ ಕೆ.ಎನ್. ಸುರೇಶ್ ಮನವಿ ಮಾಡಿದ್ದಾರೆ.
ಬ್ರಾಹ್ಮಣ ಸಂಘದ ಅಯ್ಯರ್ ನಿಧನ
ಕೋಲಾರ: ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿದ್ದ ಟಿ.ಎ.ಅಯ್ಯರ್ (84) ಮಂಗಳವಾರ ಹೃದಯಾಘಾತದಿಂದ ನಿಧನರಾದದರು. ಬ್ರಾಹ್ಮಣ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅಯ್ಯರ್ ಸಂಘದ ಅಧ್ಯಕ್ಷರಾಗಿ ಅನೇಕ ಸಾಮಾಜಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಇತ್ತೀಚೆಗೆ ಹೃದಯ ಸಂಬಂಧಿ ತೊಂದರೆಯಿಂದಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ರತ್ನಮ್ಮ, ಪುತ್ರ ವಿಜ್ಞಾನಿ ಬದರೀನಾಥ್ ಅವರೊಂದಿಗೆ ನಾಲ್ವರು ಪುತ್ರಿಯರು ಇದ್ದಾರೆ. ಅಯ್ಯರ್ ಅಂತ್ಯಕ್ರಿಯೆ ಮಂಗಳವಾರ ನಗರದಲ್ಲಿ ನೆರವೇರಿತು.