ಧಾರ್ಮಿಕತೆ ಜತೆಗೆ ವೈಚಾರಿಕ ಚಿಂತನೆಯೂ ಅಗತ್ಯ
ಕೋಲಾರ: ಧಾರ್ಮಿಕ ಸಂಪ್ರದಾಯ ಪಾಲನೆ ಜತೆಗೆ ವೈಚಾರಿಕ ಚಿಂತನೆ ಅಳವಡಿಸಿಕೊಂಡಲ್ಲಿ ತಾನೇ ತಾನಾಗಿ ಸಮಾಜ ಸುಧಾರಣೆಯಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ.
ನಗದರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಧಾರ್ಮಿಕ ಆಚರಣೆಯೂ ಮುಖ್ಯ: ಭಾರತದ ಸಂವಿಧಾನದಷ್ಟೆ ಧಾರ್ಮಿಕ ಆಚರಣೆಯೂ ಮಹತ್ವದ್ದೆ. ಆದರೆ, ಧಾರ್ಮಿಕ ಮಹತ್ವದ ಹೆಸರಿನಲ್ಲಿ ಮೌಢ್ಯತೆ ಪೋಷಿಸಬಾರದು ಎಂದು ಕಿವಿಮಾತು ಹೇಳಿದರು.
ಯೋಗ ವಿಶ್ವಾದ್ಯಂತ ಪ್ರಯೋಗ: ಯೋಗ ಜಾತ್ಯತೀತ, ಯೋಗ ಭಾರತೀಯ ಪರಂಪರೆಯ ಬಹುದೊಡ್ಡ ವೈಶಿಷ್ಟ್ಯ. ಮಾತ್ರವಲ್ಲ, ವಿಶ್ವದ ಎಲ್ಲ ದೇಶಗಳಲ್ಲಿ ಯೋಗ ಅಳವಡಿಸಿಕೊಳ್ಳಲಾಗುತ್ತಿದೆ ಎಂದ ಅವರು, ವ್ಯವಸ್ಥೆ ಮತ್ತು ವ್ಯಕ್ತಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದ್ದರೆ ಸಮಾಜ ಸುಧಾರಣೆ ಕಾಣುವುದಿಲ್ಲ. ಓಂಕಾರ ಪಠಿಸಿದಾಗ ದೇಹದಲ್ಲಿ ಉಂಟಾಗುವ ತರಂಗಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭೆ ಶೋಷಣೆ ಅಸಾಧ್ಯ: ಪ್ರತಿಭೆಯ ಯಾರೂ ನಿರ್ಲಕ್ಷಿಸಲು, ದೂರ ಇಡಲು ಅಥವಾ ಶೋಷಣೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ದೂರದೃಷ್ಟಿ, ಕ್ರಿಯಾಶೀಲತೆ ಇದ್ದರೆ ಸಾಧನೆ ಮಾಡಲು ಸಾಧ್ಯ. ಜಾಗತಿಕವಾಗಿ ಪ್ರತಿಭೆಗೆ ಮಹತ್ವ ಇದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಗೋವಿಂದರಾಜು ಮಾತನಾಡಿ, ಯಶಸ್ಸಿಗೆ ಅವಕಾಶ ಸಿಗಬೇಕು. ಸರಕಾರದ ಜತೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಂತಹ ಸೇವಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಸಿಗುವುದು ಕಷ್ಟ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಖೋಟಾ 2500 ಮೆರಿಟ್ ಸೀಟುಗಳಲ್ಲಿ ಶೇ.95 ಮೇಲ್ಪಟ್ಟು ಸಿಇಟಿಯಲ್ಲಿ ಅಂಕ ಪಡೆದವರಿಗಷ್ಟೇ ಅವಕಾಶ ಸಿಗುತ್ತಿದೆ ಎಂದರೆ ಶಿಕ್ಷಣಕ್ಕಿರುವ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕೆಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ ಸೇವಾ ಪ್ರಮುಖ್ ಡಾ. ಶಿವಕುಮಾರ್, ಸಂಸ್ಕಾರ, ಸಂಘಟನೆ ಹಾಗೂ ಸೇವೆ ಸಮಿತಿಯ ಪ್ರಮುಖ ಅಂಶಗಳು. ಸಮಿತಿಯಲ್ಲಿ ಈವರೆಗೆ 84 ಲಕ್ಷ ಮಂದಿ ಯೋಗ ತರಬೇತಿ ಪಡೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ 647 ಶಾಖೆಗಳು, 12 ವಿದೇಶಗಳಲ್ಲಿ ಶಾಖೆಗಳಲ್ಲಿ ಉಚಿತ ಯೋಗ ಕಲಿಸಲಾಗುತ್ತಿದೆ ಎಂದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕೋಲಾರ ಶಾಖೆ ಅಧ್ಯಕ್ಷ ಬಿಸಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.
ಡಾ. ರಾಮಚಂದ್ರ, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಮಾಜಿ ಸೆನೆಟಟ್ಸದಸ್ಯ ಕೆ.ಬಿ.ಗೋಪಾಲಕೃಷ್ಣ ಮಾತನಾಡಿದರು.
ಪ್ರತಿಭಾವಂತರಿಗೆ ನೆರವು: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 150 ಮಂದಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು.
ಸಮಿತಿಯ ಪದಾಧಿಕಾರಿಗಳ ಮಕ್ಕಳಲ್ಲಿ ಪ್ರತಿಭಾನ್ವಿತರಾದ ಭವ್ಯ, ವಿ.ಪೂಜಾ ಹಾಗೂ ವಿಶೇಷ ಸಾಧನೆಗಾಗಿ ವರ್ಷದ ವಿದ್ಯಾರ್ಥಿಯನ್ನಾಗಿ ಆರ್. ಸಂಕೇತ್ರನ್ನು ಸ್ವಾಮೀಜಿ ಪುರಸ್ಕರಿಸಿದರು. ಸಮಿತಿ ಅಧ್ಯಕ್ಷ ಬಿಸಪ್ಪಗೌಡ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.